ಉಪ್ಪಿನಂಗಡಿ: ಬಾಲಕಿಯರ ಮಾನಭಂಗಕ್ಕೆ ಯತ್ನ
ಉಪ್ಪಿನಂಗಡಿ, ಜೂ.15: ಶಾಲೆಗೆ ಹೋಗುತ್ತಿದ್ದ ಬಾಲಕಿಯರಿಬ್ಬರ ಮಾನಭಂಗಕ್ಕೆ ಯತ್ನಿಸಿ, ಅವರಿಗೆ ಜೀವಬೆದರಿಕೆಯೊಡ್ಡಿದ ಘಟನೆ ಮೊಗ್ರು ಗ್ರಾಮದ ಮುರ ಎಂಬಲ್ಲಿ ಬುಧವಾರ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ತಣ್ಣೀರುಪಂಥ ಗ್ರಾಮದ ಅಳಕೆ ನಿವಾಸಿ ಅಬ್ದುರ್ರಹ್ಮಾನ್ ಎಂಬವರ ಪುತ್ರ ಸಲೀಂ (40) ಬಾಲಕಿಯರ ಮಾನಭಂಗಕ್ಕೆ ಯತ್ನಿಸಿದ ಆರೋಪಿ. ಬುಧವಾರ ಬೆಳಗ್ಗೆ ಮೊಗ್ರು ಗ್ರಾಮದ ಓರ್ವ ಪರಿಶಿಷ್ಟ ಪಂಗಡದ ಬಾಲಕಿ ಸೇರಿದಂತೆ ಹದಿನಾರರ ಹರೆಯದ ಇಬ್ಬರು ಬಾಲಕಿಯರು ಶಾಲೆಗೆ ಹೋಗುತ್ತಿದ್ದ ಸಂದರ್ಭ ಮುರ ಎಂಬಲ್ಲಿ ಅವರನ್ನು ಅಡ್ಡಗಟ್ಟಿದ್ದ ಈತ ಅವರ ಮಾನಭಂಗಕ್ಕೆ ಯತ್ನಿಸಿದ್ದ. ಅಲ್ಲದೇ, ಈ ವಿಷಯವನ್ನು ಮನೆಯಲ್ಲಿ ತಿಳಿಸಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆಬೆದರಿಕೆಯೊಡ್ಡಿದ್ದ.
ಈ ಬಗ್ಗೆ ಮಾನಭಂಗ ಯತ್ನಕ್ಕೊಳಗಾದ ಓರ್ವ ಬಾಲಕಿಯ ತಾಯಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಇದೇ ಆರೋಪಿ ತಮ್ಮ ನೆರೆಕರೆಯ ಯುವತಿಯೋರ್ವಳ ಮಾನಭಂಗಕ್ಕೂ ಯತ್ನಿಸಿದ್ದ ಎಂದು ಆರೋಪಿಸಿದ್ದಾರೆ. ತಕ್ಷಣವೇ ಈತನನ್ನು ವಶಕ್ಕೆ ಪಡೆದ ಉಪ್ಪಿನಂಗಡಿ ಪೊಲೀಸರು ಈತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.