ಕಡಬ: ಶತಾಯುಷಿ ದೇವು ಪೂಜಾರಿ ನಿಧನ
ಕಡಬ, ಜೂ.15: ಶತಾಯುಷಿ, ಕಂಬಳ ಪ್ರೇಮಿ ಪುತ್ತೂರು ತಾಲೂಕಿನ ಐತ್ತೂರು ಗ್ರಾಮದ ಗೇರ್ತಿಲ ನಿವಾಸಿ ದೇವು ಪೂಜಾರಿ (105)ಯವರು ಬುಧವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಕೃಷಿಕರಾಗಿದ್ದ ಇವರು ಪರಿಸರದಲ್ಲಿ ನಡೆಯುವ ಕಂಬಳಗಳಲ್ಲೆಲ್ಲಾ ಭಾಗವಹಿಸಿ ಕನಹಲಗೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಅದೆಷ್ಟೋ ಪದಕಗಳನ್ನು ತನ್ನದಾಗಿಸಿಕೊಂಡಿದ್ದರು. ಮೂರ್ತೆಗಾರಿಕೆ ವೃತ್ತಿಯಲ್ಲಿ ಮುಂದುವರಿದು, ವರ್ಷದ ಹಿಂದಿನವರೆಗೂ ಮರಕ್ಕೆ ಹತ್ತಿ ಶೇಂದಿ ತೆಗೆಯುತ್ತಿದ್ದ ಇವರು ಪರಿಸರದಲ್ಲಿ ಚಿರಪರಿಚಿತರಾಗಿದ್ದರು.
ದೇವು ಪೂಜಾರಿಯವರು ಕಂಬಳದ ಕನಹಲಗೆಯಲ್ಲಿ ಓಡಿಸುವ ದೃಶ್ಯಗಳೂ ಖ್ಯಾತ ನಟರಾದ ವಿಷ್ಣುವರ್ಧನ್, ಶಿವರಾಜ್ ಕುಮಾರ್ ಅಭಿನಯದ ಸಿನಿಮಾಗಳಲ್ಲಿದ್ದವು. ಆರ್ಥಿಕವಾಗಿ ಹಿಂದುಳಿದಿದ್ದ ಸುಮಾರು 1,000ಕ್ಕಿಂತಲೂ ಹೆಚ್ಚಿನ ಮದುವೆಗಳನ್ನು ಇವರೇ ಮುಂದೆ ನಿಂತು ಮಾಡಿಸಿದ್ದರು.
ಇಂದಿನವರೆಗೂ ತನ್ನ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದ ಇವರು ಎಳನೀರಿನ ಜೊತೆ ಅವಲಕ್ಕಿ(ಬಜಿಲ್-ಬನ್ನಂಗಾಯಿ)ಯನ್ನು ಆಹಾರವಾಗಿ ಸೇವಿಸುತ್ತಿದ್ದರು. ಉಳಿದಂತೆ ಆಹಾರಲ್ಲಿ ಮೊಸರು, ಜೇನುತುಪ್ಪ ಬಳಸುತ್ತಿದ್ದರು. ಸ್ವತಃ ಮೂರ್ತೆಗಾರಿಕೆ ಮಾಡುತ್ತಿದ್ದರೂ ಮದ್ಯಪಾನ ಮಾಡದೆ ಇತರರಿಗೆ ಮಾದರಿಯಾಗಿದ್ದರು.
ಇವರು ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ನಿವೃತ್ತ ಕಚೇರಿ ಮೇಲ್ವಿಚಾರಕ ಪರಮೇಶ್ವರ ಪೂಜಾರಿ ಹಾಗೂ ಪುತ್ತೂರು ತಾಲೂಕು ಪಂಚಾಯತ್ ಸದಸ್ಯೆ ಕುಸುಮಾರ ಸಹಿತ 3 ಗಂಡು ಹಾಗೂ 3 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.