1 ರೂ. ಕಾಯಿನ್ ಹಾಕಿದರೆ ಲಭಿಸಲಿದೆ 20 ಲೀ. ಕುಡಿಯುವ ನೀರು
ಬೆಳ್ತಂಗಡಿ, ಜೂ.15: ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದ್ದು, ಅದರಂತೆ ಪ್ರಾಯೋಗಿಕವಾಗಿ ಬೆಳ್ತಂಗಡಿ ತಾಲೂಕಿನ 13 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೊದಲಿಗೆ ಈ ಯೋಜನೆ ಜಾರಿಗೆ ಬರಲಿದೆ.
ಕಾಯಿನ್ ಬೂತ್ ಮೂಲಕ ಕುಡಿಯುವ ನೀರನ್ನು ನೀಡುವ ಯೋಜನೆ ಇದಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೀರು ಮತ್ತು ನೈರ್ಮಲೀಕರಣ ವಿಭಾಗ ಇದರ ಅನುಷ್ಠಾನವನ್ನು ಮಾಡುತ್ತಿದೆ. ಬೂತ್‌ಗೆ ಹೋಗಿ 1ರೂ. ಕಾಯಿನ್ ಹಾಕಿ ಬಟನ್ ಒತ್ತಿದರೆ ಕೂಡಲೇ 10 ಲೀ. ನೀರು ಸಿಗಲಿದೆ. ಮತ್ತೆ ನೀರು ಬೇಕಾದರೆ ಮತ್ತೆ 1ರೂ. ಕಾಯಿನ್ ಹಾಕಬೇಕು. ಅದಕ್ಕೆ ಬೂತ್ ನಿರ್ಮಾಣ ಮಾಡಿ, ಯಂತ್ರವನ್ನು ಅಳವಡಿಸಲಾಗುತ್ತದೆ. ಗ್ರಾಮ ಪಂಚಾಯತ್‌ಗಳಲ್ಲಿ ಈಗ ಇರುವ ನೀರಿನ ವ್ಯವಸ್ಥೆಯಿಂದಲೇ ಸಂಪರ್ಕ ಕಲ್ಪಿಸಿ, ನೀರನ್ನು ಶುದ್ಧೀಕರಣಗೊಳಿಸಿ ನೀಡಲಾಗುತ್ತದೆ.
ಬೆಳ್ತಂಗಡಿ ತಾಲೂಕಿನಲ್ಲಿ 13 ಕಡೆಗಳಲ್ಲಿ ಮೊದಲ ಹಂತದಲ್ಲಿ ಈ ನೀರಿನ ಬೂತ್ ಕಾರ್ಯಾಚರಿಸಲಿದೆ. ಅಳದಂಗಡಿ ಗ್ರಾಪಂ.ನ ಸುಲ್ಕೇರಿ, ಅಳದಂಗಡಿ, ಅರಸಿನಮಕ್ಕಿ ಗ್ರಾಪಂ.ನ ನೇಲ್ಯಡ್ಕ, ಬಂದಾರು ಗ್ರಾಪಂ.ನ ಮೈರೋತ್ತಡ್ಕ, ಧರ್ಮಸ್ಥಳ ಗ್ರಾಪಂ.ನ ಕನ್ಯಾಡಿ, ಕಳಿಯ ಗ್ರಾಪಂ.ನ ನಾಳ, ಕುಕ್ಕೇಡಿ ಗ್ರಾಪಂ.ನ ಗೋಳಿಯಂಗಡಿ, ಕುವೆಟ್ಟು ಗ್ರಾ.ಪಂ.ನ ಮದ್ದಡ್ಕ, ಮಡಂತ್ಯಾರು ಗ್ರಾಪಂ.ನ ಮಡಂತ್ಯಾರು, ಮಿತ್ತಬಾಗಿಲು ಗ್ರಾಪಂ.ನ ಕಾಜೂರು, ನಡ ಗ್ರಾಪಂ.ನ ದೊಂಪದಪಲ್ಕೆ, ಪಡಂಗಡಿ ಗ್ರಾಪಂ.ನ ಪೊಯ್ಯಗುಡ್ಡೆ, ವೇಣೂರು ಗ್ರಾ.ಪಂ.ನ ವೇಣೂರಿನಲ್ಲಿ ಘಟಕಗಳು ನಿರ್ಮಾಣವಾಗಲಿವೆ.
ಪ್ರತಿ ಘಟಕಕ್ಕೆ 8.50 ಲಕ್ಷ ರೂ. ವೆಚ್ಚ ತಗಲಲಿದ್ದು, ಸರಕಾರ ತಲಾ 5 ಲಕ್ಷ ರೂ. ಮಂಜೂರು ಮಾಡಿದೆ. ಉಳಿದ 3.50 ಲಕ್ಷ ರೂ.ಗಳನ್ನು ಸ್ಥಳೀಯ ಸಂಸ್ಥೆ ಅಥವಾ ಸ್ಥಳೀಯ ಮೂಲಗಳಿಂದ ಬಳಸಬೇಕಿದೆ. ಮುಂದಿನ ವರ್ಷಾರಂಭದೊಳಗೆ ಯೋಜನೆ ಕಾರ್ಯಗತವಾಗಲಿದ್ದು, 13 ಗ್ರಾ.ಪಂ. ವ್ಯಾಪ್ತಿಯಲ್ಲಿ ಯಶಸ್ವಿಯಾದರೆ ಉಳಿದ ಕಡೆಗಳಲ್ಲಿಯೂ ಆರಂಭವಾಗಲಿದೆ.