ಮೊಸಳೆ ಎಳೆದೊಯ್ದಿದ್ದ ಮಗುವಿನ ಶವ ಪತ್ತೆ
ಒರ್ಲಾಂಡೊ, ಜೂ. 16: ಅಮೆರಿಕದ ಫ್ಲೋರಿಡ ರಾಜ್ಯದ ಒರ್ಲಾಂಡೊದಲ್ಲಿರುವ ವಾಲ್ಡ್ ಡಿಸ್ನಿ ವರ್ಲ್ಡ್‌ನಲ್ಲಿ, ಕುಟುಂಬ ಸದಸ್ಯರ ಕಣ್ಣ ಮುಂದೆಯೇ ಮೊಸಳೆಯೊಂದು ಎಳೆದುಕೊಂಡು ಹೋಗಿದ್ದ 2 ವರ್ಷದ ಬಾಲಕನ ಶವವನ್ನು ಪೊಲೀಸ್ ಮುಳುಗುಗಾರರು ಬುಧವಾರ ಹೊರತೆಗೆದಿದ್ದಾರೆ.
ಮಂಗಳವಾರ ರಾತ್ರಿ ನೀರಿನ ಹೊರತುದಿಯಲ್ಲಿ ಆಡುತ್ತಿದ್ದಾಗ ಮಗುವನ್ನು ಮೊಸಳೆ ಎಳೆದುಕೊಂಡು ಹೋಗಿತ್ತು. ಮಗುವನ್ನು ರಕ್ಷಿಸಲು ಹೆತ್ತವರು ನಡೆಸಿದ ಪ್ರಯತ್ನಗಳ ಹೊರತಾಗಿಯೂ, ಮೊಸಳೆಯು ಮಗುವನ್ನು ದಿಬ್ಬವೊಂದಕ್ಕೆ ಎಳೆದೊಯ್ದಿತ್ತು.
ಮಗು ನಾಪತ್ತೆಯಾದ ಸ್ಥಳದ ಪಕ್ಕದಲ್ಲೇ ಮಗುವಿನ ದೇಹವನ್ನು ಪತ್ತೆಹಚ್ಚಲಾಗಿದೆ ಹಾಗೂ ದೇಹವು ಸಂಪೂರ್ಣವಾಗಿ ಸುಸ್ಥಿತಿಯಲ್ಲಿದೆ ಎಂದು ಆರೇಂಜ್ ಕೌಂಟಿ ಶರೀಫ್ ಜೆರಿ ಡೆಮಿಂಗ್ಸ್ ತಿಳಿಸಿದರು.
ಮೊಸಳೆಯು 4ರಿಂದ 7 ಅಡಿ ಉದ್ದವಿರಬೇಕೆಂದು ಭಾವಿಸಲಾಗಿದೆ.
ಇದಕ್ಕೂ ಮೊದಲು ವನ್ಯಜೀವಿ ಅಧಿಕಾರಿಗಳು ‘ಸೆವೆನ್ ಸೀಸ್ ಲಗೂನ್’ನಿಂದ ಐದು ಮೊಸಳೆಗಳನ್ನು ಸೆರೆಹಿಡಿದು ಕೊಂದು, ಬಾಲಕನ ಅವಶೇಷಗಳನ್ನು ಪತ್ತೆಹಚ್ಚುವುದಕ್ಕಾಗಿ ಅವುಗಳ ಹೊಟ್ಟೆ ಸೀಳಿದ್ದರು.
14 ಅಡಿ ಆಳದವರೆಗೆ ವಿಸ್ತರಿಸಿರುವ ಮಾನವ ನಿರ್ಮಿತ ಸರೋವರವನ್ನು ಶೋಧ ತಂಡಗಳು ಬುಧವಾರ ಜಾಲಾಡಿದ್ದು, ಅದರ ಬೀಚ್‌ಗಳು ಮತ್ತು ಮನರಂಜನಾ ಮರೀನಗಳನ್ನು ಮುಚ್ಚಲಾಗಿತ್ತು.
ನೆಬ್ರಸ್ಕದ ಒಮಾಹ ನಿವಾಸಿ ಕುಟುಂಬವು ರಜೆಯಲ್ಲಿ ಅಲ್ಲಿಗೆ ಬಂದಿತ್ತು.
ಖಾರಿಯಲ್ಲಿ ಈಜಬಾರದು ಎಂಬ ಸೂಚನಾಫಲಕಗಳನ್ನು ಹಾಕಲಾಗಿತ್ತು. ನೀರಿನ ಹೊರತುದಿಯಲ್ಲಿ ಬಾಲಕ ಆಟವಾಡುತ್ತಿದ್ದಾಗ ಹೆತ್ತವರು ಸಮೀಪದಲ್ಲೇ ದಡದಲ್ಲಿ ವಿಶ್ರಮಿಸುತ್ತಿದ್ದರು.