ಜೂನ್ ಅಂತ್ಯದೊಳಗೆ ಉದ್ದಿಮೆ ಪರವಾನಿಗೆ ಮಾಡಿಸಲು ಸೂಚನೆ

Update: 2016-06-16 12:00 GMT

ಮಂಗಳೂರು, ಜೂ.16: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ದಿಮೆದಾರರು ಜೂನ್ ಅಂತ್ಯದೊಳಗೆ ಹಳೆ ಪರವಾನಿಗೆ ನವೀಕರಣ ಅಥವಾ ಹೊಸ ಪರವಾನಿಗೆಯನ್ನು ಮಾಡಿಸಿಕೊಳ್ಳಬೇಕು ಎಂದು ಪಾಲಿಕೆಯ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ಸೂಚಿಸಿದ್ದಾರೆ.

ನಗರದ ಪಾಲಿಕೆ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 29,100 ಉದ್ದಿಮೆದಾರರು ಪರವಾನಗಿಯನ್ನು ನವೀಕರಿಸಿದ್ದು, 740 ಸಂಖ್ಯೆಯ ಉದ್ದಿಮೆಗಳನ್ನು ರದ್ದುಪಡಿಸಲಾಗಿದೆ. ಉಳಿದಂತೆ 8,799 ಉದ್ದಿಮೆಗಳು ಪರವಾನಗಿಯನ್ನು ನವೀಕರಿಸಲು ಬಾಕಿ ಇದೆ ಎಂದರು.

ಪರವಾನಿಗೆಯನ್ನು ಪಡೆಯದ ಅಥವಾ ನವೀಕರಿಸದ ಉದ್ದಿಮೆಗಳನ್ನು ಕಾನೂನು ಪ್ರಕಾರ ಮುಚ್ಚಲು ಕ್ರಮ ವಹಿಸಲಾಗುವುದು. ಇದಕ್ಕಾಗಿ ಅರೋಗ್ಯ ವಿಭಾಗ ಮತ್ತು ಕಂದಾಯ ವಿಭಾಗದಿಂದ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನ ಮೇ ಅಂತ್ಯಕ್ಕೆ 1.87 ಕೋಟಿ ರೂ. ಸಂಗ್ರಹಿಸಲಾಗಿದೆ. ಇದರಲ್ಲಿ 1.74 ಕೋಟಿ ರೂ. ನವೀಕರಣದಿಂದ ಹಾಗೂ 13 ಲಕ್ಷ ಹೊಸ ಪರವಾನಗಿಯಿಂದ ಸಂಗ್ರಹವಾಗಿದೆ. ಇದರ ಹೊರತಾಗಿಯೂ 1.21 ಕೋಟಿ ರೂ. ಸಂಗ್ರಹಕ್ಕೆ ಬಾಕಿ ಇದೆ. ಈ ಮೊತ್ತವನ್ನು ವಸೂಲಿ ಮಾಡಲು ವಿಶೇಷ ಅಭಿಯಾನ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದ ಕವಿತಾ ಸನಿಲ್, ಹೋಟೆಲ್ ಮಾಲಕರು ಗ್ರಾಹಕರಿಗೆ ಬಿಸಿ ನೀರನ್ನೇ ನೀಡಬೇಕು, ನೀರು ಶೇಖರಿಸಿಡುವ ಜಾಗವನ್ನು ಸಂಪೂರ್ಣ ಮುಚ್ಚಿಡಬೇಕು. ಹೂವಿನ ಕುಂಡಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಎಂದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆಯ. 2015ರ ಜನವರಿಯಿಂದ ಮೇ ತಿಂಗಳ ವರೆಗೆ 826 ಮಲೇರಿಯಾ ಪ್ರಕರಣ ದಾಖಲಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ 449 ಪ್ರಕರಣ ದಾಖಲಾಗಿದೆ. 2015ರಲ್ಲಿ ಜನವರಿಯಿಂದ ಮೇ ವರೆಗಿನ ಅವಧಿಯಲ್ಲಿ 188 ಡೆಂಗ್ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ಈ ವರ್ಷ 130 ಡೆಂಗ್ ಪ್ರಕರಣ ವರದಿಯಾಗಿದೆ. ಒಟ್ಟಾರೆ ಈ ವರ್ಷ ಸಾಂಕ್ರಾಮಿಕ ರೋಗಗಳ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದು ಅವರು ತಿಳಿಸಿದರು.

ಮಹಾನಗರ ಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ರಾಜೇಶ್, ರಜನೀಶ್, ಲತಾ ಸಾಲ್ಯಾನ್, ಉಪ ಆಯುಕ್ತ ಗೋಕುಲ್‌ದಾಸ್ ನಾಯಕ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಿಷೇಧಿತ ಪ್ಲಾಸ್ಟಿಕ್‌ಚೀಲ ಬಳಸಿದರೆ ದಂಡ

ರಾಜ್ಯ ಸರಕಾರದ ಆದೇಶದಂತೆ ಪ್ಲಾಸ್ಟಿಕ್ ಕೈ ಚೀಲಗಳ ಮಾರಾಟ, ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೂ ಹಲವರು ಪ್ಲಾಸ್ಟಿಕ್ ಕೈ ಚೀಲಗಳ ಮಾರಾಟ, ಬಳಕೆಯನ್ನು ಮಾಡುವುದು ಕಂಡು ಬಂದಿದೆ. ಅಂತವರ ವಿರುದ್ಧ ಕಾನೂನು ಪ್ರಕಾರ ದಂಡ ವಿಧಿಸಿ ಕ್ರಮ ಕೈಗೊಳ್ಳುವುದಾಗಿ ಕವಿತಾ ಸನಿಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News