ವಿಭಿನ್ನ ಶೈಲಿಯ ಅಂಪೈರ್ ಬೌಡೆನ್ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಲಭ್ಯ
ವೆಲ್ಲಿಂಗ್ಟನ್, ಜೂ.16: ತನ್ನ ವಿಭಿನ್ನ ಕಾರ್ಯ ಶೈಲಿಯ ಮೂಲಕ ಐಸಿಸಿ ಅಂಪೈರ್ ಸಮಿತಿಯಲ್ಲಿ ಗುರುತಿಸಿಕೊಂಡಿದ್ದ ನ್ಯೂಝಿಲೆಂಡ್‌ನ ಅಂಪೈರ್ ಬಿಲ್ಲಿ ಬೌಡೆನ್ ಇನ್ನು ಮುಂದೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಯು ಬೌಡೆನ್‌ರನ್ನು ಅಂತಾರಾಷ್ಟ್ರೀಯ ಅಂಪೈರ್ ಸಮಿತಿಯಿಂದ ಕೈಬಿಟ್ಟು ಹಿಂಭಡ್ತಿ ನೀಡಿರುವುದೇ ಇದಕ್ಕೆ ಕಾರಣ.
ಬೌಡೆನ್‌ರನ್ನು ರಾಷ್ಟ್ರೀಯ ಸಮಿತಿಗೆ ವರ್ಗಾಯಿಸಲಾಗಿದೆ. ಇದರರ್ಥ ಅವರು ನ್ಯೂಝಿಲೆಂಡ್‌ನ ದೇಶೀಯ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದಾಂಡಿಗರು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದಾಗ ಬೌಡೆನ್ ಅವರ ನಡವಳಿಕೆ ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿತ್ತು. ಬ್ಯಾಟ್ಸ್‌ಮನ್ ಬೌಂಡರಿ ಬಾರಿಸಿದರೆ ಬೌಡನ್ ಡ್ಯಾನ್ಸ್ ಮಾಡುತ್ತಾ ಬೌಂಡರಿ ಸಿಗ್ನಲ್ ನೀಡುತ್ತಿದ್ದರು. ಸಿಕ್ಸರ್ ಸಿಡಿಸಿದರೆ ಎರಡು ಕೈಗಳ ಬೆರಳನ್ನು ಕೊಕ್ಕೆ ಮಾಡಿ ತೋರಿಸುತ್ತಿದ್ದರು. ಔಟ್ ನೀಡುವಾಗಲೂ ಅವರ ಬೆರಳು ಕೊಕ್ಕೆಯಾಗುತ್ತಿತ್ತು. ಬೌಡೆನ್ ನೀಡುತ್ತಿದ್ದ ತೀರ್ಪುಗಳು ಕೂಡ ಅಷ್ಟೇ ನಿಖರವಾಗಿರುತ್ತಿತ್ತು.
1995ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ್ನು ಪ್ರವೇಶಿಸಿ ಅಂಪೈರ್ ವೃತ್ತಿ ಆರಂಭಿಸಿದ್ದ ಬೌಡೆನ್ 84 ಟೆಸ್ಟ್, 200 ಏಕದಿನ ಹಾಗೂ 24 ಟ್ವೆಂಟಿ-20 ಪಂದ್ಯಗಳಲ್ಲಿ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ವೆಲ್ಲಿಂಗ್ಟನ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯ-ನ್ಯೂಝಿಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಕೊನೆಯ ಬಾರಿ ಅಂಪೈರ್ ಆಗಿ ಕಾಣಿಸಿಕೊಂಡಿದ್ದರು.