ಕೋಟ: ಬಸ್ ಪಲ್ಟಿ; ಪವಾಡಸದೃಶವಾಗಿ ಪ್ರಯಾಣಿಕರು ಪಾರು
ಕುಂದಾಪುರ, ಜೂ.16: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಸಮೀಪ ಸಂಭವಿಸಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಕುಂದಾಪುರದಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಖಾಸಗಿ ಬಸ್ ಕೋಟ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೆಳಗ್ಗಿನ ವೇಳೆ ವಿಪರೀತ ಮಳೆ ಬರುತ್ತಿದ್ದು, ರಸ್ತೆಯಲ್ಲಿ ನೀರು ಹರಿಯುತ್ತಿತ್ತು. ಬಸ್ ಚಾಲಕ ಎದುರುಗಡೆ ಹೋಗುತ್ತಿದ್ದ ಲಾರಿಯೊಂದನ್ನು ಅತೀವೇಗದಲ್ಲಿ ಓವರ್‌ಟೇಕ್ ಮಾಡಲು ಮುಂದಾಗಿದ್ದು, ಈ ವೇಳೆ ಬಸ್ ಅಂಡರ್‌ಪಾಸ್‌ನ ತಡೆಗೋಡೆಗೆ ಢಿಕ್ಕಿಯಾಗಿತ್ತು. ಈ ವೇಳೆ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದು, ರಸ್ತೆಯಲ್ಲಿ ನೀರಿದ್ದ ಪರಿಣಾಮ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಬಸ್‌ನಲ್ಲಿ 34 ಮಹಿಳೆಯರ ಸಹಿತ 45 ಪ್ರಯಾಣಿಕರಿದ್ದು, ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳಕ್ಕೆ ಕೋಟ ಠಾಣಾ ಪೊಲೀಸರು ಆಗಮಿಸಿ, ಬಸ್‌ನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು ಎಂದು ತಿಳಿದುಬಂದಿದೆ.