ವಿರಾಟ್ ಕೊಹ್ಲಿ ದಾಖಲೆ ಮುರಿದ ಹಾಶಿಮ್ ಅಮ್ಲ
ಸೈಂಟ್‌ಕಿಟ್ಸ್, ಜೂ.16: ದಕ್ಷಿಣ ಆಫ್ರಿಕದ ಆರಂಭಿಕ ಬ್ಯಾಟ್ಸ್‌ಮನ್ ಹಾಶಿಮ್ ಅಮ್ಲ ವೆಸ್ಟ್‌ಇಂಡೀಸ್ ವಿರುದ್ಧದ ತ್ರಿಕೋನ ಏಕದಿನ ಪಂದ್ಯದಲ್ಲಿ ಅತ್ಯಂತ ವೇಗವಾಗಿ 23ನೆ ಏಕದಿನ ಶತಕ ಪೂರೈಸಿದ್ದಾರೆ. ಈ ಮೂಲಕ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.
ಕೆಲವು ಸಮಯದಿಂದ ಅಮ್ಲ ಅವರು ಕೊಹ್ಲಿಯ ದಾಖಲೆಯನ್ನು ಮುರಿಯುತ್ತಾ ಬಂದಿದ್ದಾರೆ. ಇದೀಗ ಮತ್ತೊಮ್ಮೆ ದಾಖಲೆಯನ್ನು ನಿರ್ಮಿಸಿದ್ದಾರೆ. ಗುರುವಾರ ನಡೆದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಅಮ್ಲ ಅವರು ಕೇವಲ 132ನೆ ಇನಿಂಗ್ಸ್‌ನಲ್ಲಿ 23ನೆ ಶತಕ ತಲುಪಿದರು. ಕೊಹ್ಲಿ 157ನೆ ಇನಿಂಗ್ಸ್‌ನಲ್ಲಿ 23ನೆ ಶತಕ ಬಾರಿಸಿದ್ದರು. ಅಮ್ಲ ಸಕ್ರಿಯ ದಾಂಡಿಗರ ಪೈಕಿ 23 ಶತಕಗಳನ್ನು ಬಾರಿಸಿದ ಮೂರನೆ ದಾಂಡಿಗ. ವಿರಾಟ್ ಕೊಹ್ಲಿ(24) ಹಾಗೂ ಎಬಿಡಿಲಿಯರ್ಸ್(24) ಹೆಚ್ಚು ಶತಕ ಬಾರಿಸಿದ ದಾಂಡಿಗರಾಗಿದ್ದಾರೆ.
ಅಮ್ಲ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 99 ಎಸೆತಗಳಲ್ಲಿ 13 ಬೌಂಡರಿಗಳ ಸಹಾಯದಿಂದ 110 ರನ್ ಗಳಿಸಿ ದಕ್ಷಿಣ ಆಫ್ರಿಕ ತಂಡದ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 343 ರನ್ ಗಳಿಸಲು ನೆರವಾಗಿದ್ದರು.
ಇದೇ ವೇಳೆ, ಅಮ್ಲ ಅತ್ಯಂತ ಕಡಿಮೆ ಇನಿಂಗ್ಸ್‌ನಲ್ಲಿ(14) ವಿಂಡೀಸ್ ವಿರುದ್ಧ ಸಾವಿರ ರನ್ ಪೂರೈಸಿದ ಸಾಧನೆಯನ್ನು ಮಾಡಿದರು. ಅಮ್ಲ ಏಕದಿನದಲ್ಲಿ ಸಾವಿರ ರನ್ ಪೂರೈಸಲು ಕಡಿಮೆ ಇನಿಂಗ್ಸ್ ಬಳಸಿಕೊಂಡ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಕೂಡ ಹೌದು.