ಉಳ್ಳಾಲ: ಅಧಿಕಾರಿಗಳ ಬೆವರಿಳಿಸಿದ ಸಚಿವ ಯು.ಟಿ. ಖಾದರ್
ಉಳ್ಳಾಲ, ಜೂ.16: ಈಗಾಗಲೇ ಉಳ್ಳಾಲ ಸಮುದ್ರತೀರದಲ್ಲಿ ಕಡಲ್ಕೊರೆತ ಶಾಶ್ವತ ತಡೆಯ ಬ್ರೇಕ್ ವಾಟರ್ ಕಾಮಗಾರಿ ನಡೆಯುತ್ತಿದ್ದು, ಯೋಜನೆಯ ನಿಯಮಕ್ಕೆ ವಿರುದ್ಧವಾಗಿ ನಾಲ್ಕನೆ ಹಂತದ ಮರಳು ತುಂಬಿದ ಮೂಟೆಗಳನ್ನು ಮುಂಚಿತವಾಗಿಯೇ ಕೋಟಿಗಟ್ಟಲೆ ರೂಪಾಯಿ ವ್ಯಯಿಸಿ ಸಮುದ್ರಕ್ಕೆ ಹಾಕಿದ್ದು, ಮೂಟೆಗಳ ಮರಳೆಲ್ಲಾ ಚೆಲ್ಲಿ ಗೋಣಿಚೀಲಗಳು ಸಮುದ್ರದಲ್ಲಿ ತೇಲುತ್ತಿವೆ. ಈ ಬಗ್ಗೆ ಯೋಜನೆಯ ಅಧಿಕಾರಿಗಳಲ್ಲಿ ಸ್ಥಳೀಯ ಕೌನ್ಸಿಲರ್ ಕೇಳಿದರೆ ಕುಡಿದು ಮಾತನಾಡಬೇಡಿ ಎಂದು ಗದರಿಸುತ್ತಾರೆಂದು ನಗರಸಭಾ ವಿರೋಧ ಪಕ್ಷದ ಸದಸ್ಯ ಇಸ್ಮಾಯೀಲ್ ಪೊಡಿಮೋನು ಗುರುವಾರ ಉಳ್ಳಾಲ ನಗರ ಸಭೆಯಲ್ಲಿ ಆರೋಪಿಸಿದ್ದು, ಈ ಬಗ್ಗೆ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.
ಆರೋಗ್ಯ ಸಚಿವ ಯು.ಟಿ ಖಾದರ್ ಮಳೆಗಾಲದಲ್ಲಿ ಎದುರಾಗುವ ಆರೋಗ್ಯ, ರಸ್ತೆ, ಕಡಲ್ಕೊರೆತ, ಚರಂಡಿ, ಇನ್ನಿತರ ಸಮಸ್ಯೆಗಳನ್ನು ಎದುರಿಸುವ ಬಗ್ಗೆ ಉಳ್ಳಾಲ ನಗರಸಭೆಯಲ್ಲಿ ಗುರುವಾರ ಸಭೆಯನ್ನು ಕರೆದಿದ್ದರು.
ಉಳ್ಳಾಲ ನಗರಸಭಾ ವ್ಯಾಪ್ತಿಯ ರಸ್ತೆಗಳೆಲ್ಲಾ ಒಳಚರಂಡಿ(ಯುಜಿಡಿ)ಕಾಮಗಾರಿಯಿಂದ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು, ಸಾರ್ವಜನಿಕರ ತೆರಿಗೆ ಹಣ ಪೋಲಾಗಿ ಹಲವು ವರ್ಷಗಳು ಉರುಳಿದರೂ ಕೂಡಾ ಅಧಿಕಾರಿಗಳು ಮಾತ್ರ ಕಾಮಗಾರಿಯನ್ನು ದಡ ಸೇರಿಸದೇ ಇರುವುದರ ಬಗ್ಗೆ ನಗರಸಭೆ ಅಧ್ಯಕ್ಷರೂ ಸೇರಿದಂತೆ ಕೌನ್ಸಿಲರ್‌ಗಳು ಸೇರಿ ಯುಜಿಡಿ ಅಧಿಕಾರಿಗಳನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.
ನಾಲ್ಕು ವರ್ಷಗಳ ಹಿಂದೆಯೇ ಉಳ್ಳಾಲದಲ್ಲಿ ಒಳಚರಂಡಿ ಕಾಮಗಾರಿ ಆರಂಭವಾಗಿದ್ದು ರಸ್ತೆ ಮಧ್ಯದಲ್ಲಿ ಅಗೆಸಿರುವ ಚೇಂಬರ್‌ನಿಂದಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಗಳೆಲ್ಲಾ ಕೆಟ್ಟುಹೋಗಿದ್ದು, ಮಳೆಗಾಲದಲ್ಲಿ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವಂತಾಗಿದೆ. ಈಗಾಗಲೇ ಹಲವಾರು ಮನೆಗಳಿಂದ ಒಳಚರಂಡಿಗೆ ತೆರಿಗೆಯನ್ನೂ ವಸೂಲಿ ಮಾಡಿದ್ದು, ಅವರಿಗೆ ಇನ್ನೂ ಒಳಚರಂಡಿ ಸಂಪರ್ಕ ನೀಡಲು ನಗರಸಭೆಯಿಂದ ಸಾಧ್ಯವಾಗಿಲ್ಲ.
ನಗರ ವ್ಯಾಪ್ತಿಯಲ್ಲಿ ಒಳಚರಂಡಿಯ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಇನ್ನೂ ಗುರುತಿಸದಿರುವುದು ಹಾಸ್ಯಾಸ್ಪದವಾಗಿದೆ. ಅಲ್ಲದೆ ಯುಜಿಡಿ ಕಾಮಗಾರಿಗೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿಯೋರ್ವರು ನ್ಯಾಯಾಲಯದಲ್ಲಿ ಹೂಡಿದ ವ್ಯಾಜ್ಯವೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದ್ದು, ಸಚಿವರು ಮಧ್ಯಪ್ರವೇಶಿಸಿ ಶೀಘ್ರನೆ ಕಾಮಗಾರಿ ಪೂರ್ತಿಗೊಳಿಸುವಂತೆ ನಗರಸಭಾ ಸದಸ್ಯ ಯು.ಎಚ್.ಫಾರೂಕ್ ಆಗ್ರಹಿಸಿದರು.
ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಮುಂದಿನ ರವಿವಾರವೇ ಎಲ್ಲಾ ವಾರ್ಡ್‌ಗಳ ಸದಸ್ಯರೂ ಮುಂದಾಳತ್ವ ವಹಿಸಿ ತಮ್ಮ ಕ್ಷೇತ್ರಗಳನ್ನು ಸ್ವಚ್ಛಗೊಳಿಸಿ, ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಕಾಮಗಾರಿಯ ಕಡೆ ತೆರಳಿ ಅದಕ್ಕೆ ಸಂಬಂಧ ಪಟ್ಟವರಲ್ಲಿಯೇ ಪ್ರದೇಶವನ್ನು ಸ್ವಚ್ಛಗೊಳಿಸಿ ಎಂದು ಸಚಿವ ಯು.ಟಿ ಖಾದರ್ ಸಭೆಯಲ್ಲಿ ಆದೇಶಿಸಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಚಿತ್ರಾ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಫತಾಕ್, ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಭಾಗವಹಿಸಿದ್ದರು.