×
Ad

ಶಾಲಾ ಬಸ್‌ನಿಂದ ಬಿದ್ದು ಎಲ್‌ಕೆಜಿ ಬಾಲಕಿ ಮೃತ್ಯು

Update: 2016-06-16 20:47 IST

ಬೆಳ್ತಂಗಡಿ, ಜೂ.16: ಶಾಲೆಗೆ ತೆರಳಿದ್ದ ಎಲ್‌ಕೆಜಿ ವಿದ್ಯಾರ್ಥಿನಿಯೋರ್ವಳು ಶಾಲಾ ಬಸ್‌ನ ಅಡಿಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಂಜೆ ಚಾರ್ಮಾಡಿಯಲ್ಲಿ ಸಂಭವಿಸಿದೆ.

ಕಕ್ಕಿಂಜೆಯ ಕಾರುಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿನಿ ಚಾರ್ಮಾಡಿ ನಿವಾಸಿ ಅಹ್ಮದ್ ಕುಂಞಿ ಎಂಬವರ ಪುತ್ರಿ ಫಾತಿಮತ್ ತೌಹೀದಾ (4) ಮೃತಪಟ್ಟ ಪುಟಾಣಿ. ಎಂದಿನಂತೆ ಶಾಲೆಗೆ ತೆರಳಿದ್ದ ಮಗು ಮರಳಿ ಮನೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅಕ್ಕನೊಂದಿಗೆ ಶಾಲೆಗೆ ಹೋಗಿ ಆಕೆ ಶಾಲಾ ವಾಹನದಿಂದ ಇಳಿದಿದ್ದಾಳೆ. ಬಳಿಕ ಆಕೆ ಅದೇ ಬಸ್ಸಿನ ಅಡಿಗೆ ಬಿದ್ದಿದ್ದಾಳೆಂದು ತಿಳಿದುಬಂದಿದೆ.

ಬಸ್ ಚಾಲಕ ಇದನ್ನು ಗಮನಿಸದೆ ನೇರವಾಗಿ ಬಸ್ ಅನ್ನು ಚಲಾಯಿಸಿ ಶೆಡ್‌ಗೆ ತಂದು ನಿಲ್ಲಿಸಿದ್ದಾನೆ. ಮಗು ಬಿದ್ದಿರುವುದನ್ನು ಕಂಡು ಆಕೆಯ ಅಕ್ಕ ಅಳುವುದನ್ನು ನೋಡಿ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ವೇಳೆಗೆ ಆಕೆ ಮೃತ ಪಟ್ಟಿದ್ದಳು ಎಂದು ತಿಳಿದುಬಂದಿದೆ.

ಕಾರುಣ್ಯ ಸ್ಕೂಲ್‌ನ ಬಸ್‌ನಲ್ಲಿ ಕೇವಲ ಚಾಲಕ ಮಾತ್ರ ಇದ್ದು ನಿರ್ವಾಹಕನಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಬಾಲಕಿ ಬಸ್ಸಿನಿಂದ ಇಳಿದ ಬಳಿಕ ಆಕೆಯನ್ನು ಯಾರೂ ಗಮನಿಸಿರಲಿಲ್ಲ. ಚಾಲಕ ನೇರವಾಗಿ ಬಸ್ ಚಲಾಯಿಸಿದ್ದು ಮಗು ಬಸ್ಸಿನ ಅಡಿಗೆ ಸಿಲುಕಿದ್ದಾಳೆ. ಘಟನೆಯ ಬಳಿಕ ಸಾರ್ವಜನಿಕರು ಚಾಲಕನ ವಿರುದ್ಧ ಹಾಗೂ ಶಾಲೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲ ಕಾನೂನುಗಳನ್ನು ಗಾಳಿಗೆ ತೂರಿ ಶಾಲಾಡಳಿತ ಮಕ್ಕಳನ್ನು ವಾಹನದಲ್ಲಿ ಕೊಂಡೊಯ್ಯಲಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಳಿಕ ಚಾಲಕ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ,.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News