×
Ad

ದ.ಕ.: ಮರಳುಗಾರಿಕೆ ನಿಷೇಧ ಪಾಲನೆಯಾಗುವುದೇ?

Update: 2016-06-16 23:35 IST

ಮಂಗಳೂರು, ಜೂ.16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂ.15ರಿಂದ ಆಗಸ್ಟ್ 15ರವರೆಗೆ ಎರಡು ತಿಂಗಳ ಅವಧಿಗೆ ಮರಳುಗಾರಿಕೆಯನ್ನು ನಿಷೇಧಿಸಿರುವ ಜಿಲ್ಲಾಡಳಿತ ಈ ಅವಧಿಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಸಾಗಾಟದ ಮೇಲೂ ಬಿಗಿ ಕಣ್ಗಾವಲಿಗೆ ಕ್ರಮ ಕೈಗೊಂಡಿದೆ. ಆದರೆ, ಈ ನಿಷೇಧ ಅದೆಷ್ಟು ಪಾಲನೆಯಾಗಲಿದೆ ಎಂಬ ಕುತೂಹಲ ಸಾರ್ವಜನಿಕ ವಲಯದ್ದು. ಈಗಾಗಲೇ ಮರಳು ಮಾಫಿಯಾ, ಅಕ್ರಮ ಮರಳುಗಾರಿಕೆ ಮತ್ತು ಸಾಗಾಟ ಜಿಲ್ಲೆಯಲ್ಲಿ ಸಾಕಷ್ಟು ಸುದ್ದಿ ಮಾಡಿದೆ.

ಸಾಮಾನ್ಯ ಜನರಿಗೆ ಮನೆ ಕಟ್ಟಲು ಜಿಲ್ಲಾ ವ್ಯಾಪ್ತಿಯಲ್ಲೇ ಮರಳಿನ ಕೊರತೆಯಾಗಿದ್ದರೂ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ನಿರಾತಂಕವಾಗಿ ಮರಳು ಸಾಗಾಟದ ಆರೋಪದ ಜೊತೆಯಲ್ಲೇ ಜಿಲ್ಲೆಯ ಗಡಿಗಳಲ್ಲಿ ಅಕ್ರಮ ಮರಳು ಸಾಗಾಟದ ವಾಹನಗಳನ್ನು ವಶಪಡಿಸಿಕೊಂಡಿರುವ ಪ್ರಕರಣಗಳು ಈ ಆರೋಪಗಳಿಗೆ ಪುಷ್ಟಿ ನೀಡಿವೆ. ನಿಷೇಧದ ಪೂರ್ವಭಾವಿಯಾಗಿ ಸುಮಾರು ಒಂಬತ್ತು ದಿನಗಳ ಅವಧಿಯಲ್ಲಿ ಮರಳುಗಾರಿಕೆ ನಡೆಸಿ ಮರಳನ್ನು ಸಂಗ್ರಹಿಸಿಡಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಆ ಅವಧಿಯಲ್ಲಿ ಬೇಕಾಬಿಟ್ಟಿಯಾಗಿ ಸಿಕ್ಕಸಿಕ್ಕಲೆಲ್ಲಾ ರಾಶಿ ಹಾಕಲಾಗಿರುವ ಮರಳನ್ನು ಇದೀಗ ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಗೆ ಅಕ್ರಮವಾಗಿ ಸಾಗಾಟ ಮಾಡುವುದನ್ನು ತಪ್ಪಿಸುವಲ್ಲಿ ಜಿಲ್ಲಾಡಳಿತ ಅದೆಷ್ಟು ವ್ಯವಸ್ಥಿತವಾಗಿ ನಿಯಂತ್ರಿಸಬಲ್ಲುದು ಎಂಬುದು ಸದ್ಯದ ಅನುಮಾನ.

ಜಿಲ್ಲಾಡಳಿತವು ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ಈಗಾಗಲೇ ಜಿಲ್ಲೆಯ ಪ್ರಮುಖ ಚೆಕ್‌ಪೋಸ್ಟ್‌ಗಳಲ್ಲಿ ಅಕ್ರಮ ಮರಳು ಸಾಗಾಟವನ್ನು ಪತ್ತೆಹಚ್ಚಲು ತನಿಖಾ ಠಾಣೆಗಳನ್ನು ರಚಿಸಿ ವಾಹನ ತಪಾಸಣೆ ಕಡ್ಡಾಯಗೊಳಿಸಿದೆ. ಆದರೆ ಚೆಕ್‌ಪೋಸ್ಟ್‌ಗಳಲ್ಲಿ ಕಾರ್ಯ ನಿರ್ವಹಿಸುವವರು ಅದೆಷ್ಟು ಪ್ರಾಮಾಣಿಕವಾಗಿ ಅಕ್ರಮ ಮರಳು ಸಾಗಾಟವನ್ನು ತಡೆದು, ಜಿಲ್ಲಾಡಳಿತದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಿದ್ದಾರೆ, ರಾತ್ರೋರಾತ್ರಿ ಸಾಗಾಟವಾಗುವ ಮರಳು ಲಾರಿಗಳನ್ನು ಅದೆಷ್ಟು ಕಟ್ಟುನಿಟ್ಟಾಗಿ ತಪಾಸಣೆ ನಡೆಸಬಲ್ಲರು ಎಂಬುದನ್ನು ಕಾದು ನೋಡಬೇಕಾಗಿದೆ. ಇದೇ ವೇಳೆ ಮರಳುಗಾರಿಕೆಯನ್ನು ನಿಷೇಧಿಸಿರುವ ಜಿಲ್ಲಾಡಳಿತ ಮರಳುಗಾರಿಕೆ ದೋಣಿಗಳನ್ನು ನದಿಗಳ ದಡದಿಂದ ಸುಮಾರು 2 ಕಿ.ಮೀ. ದೂರ ಸಾಗಿಸುವಂತೆಯೂ ಎಚ್ಚರಿಕೆ ನೀಡಿದೆ. ತಾತ್ಕಾಲಿಕ ಶೆಡ್‌ಗಳನ್ನು ತೆರವುಗೊಳಿಸಲು ಆದೇಶಿಸಿದೆ. ಈ ಬಗ್ಗೆ ತಾಲೂಕು ಮಟ್ಟದಲ್ಲಿ ರಚಿಸಲಾಗಿರುವ ತಂಡಗಳು ಕಟ್ಟುನಿಟ್ಟಾಗಿ 2 ತಿಂಗಳ ಅವಧಿಯಲ್ಲಿ ಕಾರ್ಯ ನಿರ್ವಹಿಸಲಿವೆ.


ಹಿರಿಯ ಅಧಿಕಾರಿಗಳಿಂದ ಭೇಟಿ-ಪರಿಶೀಲನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಮತ್ತು ಮರಳು ಸಾಗಾಟ ನಿಷೇಧ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮರಳೆತ್ತುವ ಸ್ಥಳಗಳಲ್ಲಿ ಅಧಿಕಾರಿಗಳ ತಂಡ ತೀವ್ರ ಪರಿಶೀಲನೆ ನಡೆಸುತ್ತಿದೆ. ಗುರುವಾರ ಅಪರ ಜಿಲ್ಲಾಧಿಕಾರಿ ಕುಮಾರ್, ವಿವಿಧ ನದಿ ತೀರದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಗಳೂರು ತಹಶೀಲ್ದಾರ್ ಶಿವಶಂಕರಪ್ಪಮಂಗಳೂರು ತಾಲೂಕಿನ ಅಡ್ಯಾರು, ಕಣ್ನೂರು, ಜಪ್ಪಿನಮೊಗರು, ಕೂಳೂರು ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ, ಬೋಟ್ ಹಾಗೂ ಶೆಡ್‌ಗಳ ತೆರವು ಕಾರ್ಯದ ಪರಿಶೀಲನೆ ನಡೆಸಿದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ವಿವಿಧ ನದಿ ತೀರಗಳಿಗೆ ಭೇಟಿ ನೀಡಿದ್ದು, ನೇತ್ರಾವತಿ ತೀರದಲ್ಲಿ ಎಲ್ಲ ರೀತಿಯ ಮರಳುಗಾರಿಕೆ ಬೋಟ್, ದೋಣಿ, ಯಂತ್ರಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇಂದು ಭೇಟಿ ನೀಡಿದ ಪ್ರದೇಶಗಳಲ್ಲಿ ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ಯಾವುದೇ ರೀತಿಯ ಮರಳುಗಾರಿಕೆ ನಡೆಯುತ್ತಿಲ್ಲ ಎಂದು ಮಂಗಳೂರು ತಹಶೀಲ್ದಾರ್ ಶಿವಶಂಕರಪ್ಪತಿಳಿಸಿದ್ದಾರೆ.

‘‘ಜಿಲ್ಲಾಧಿಕಾರಿ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಬೇಕಿದೆ. ಇದಕ್ಕಾಗಿ ಕಟ್ಟುನಿಟ್ಟಿನ ಅಧಿಕಾರಿಗಳನ್ನೇ ತಪಾಸಣಾ ಸ್ಥಳಗಳಲ್ಲಿ ನಿಯೋಜಿಸುವ ಅಗತ್ಯವಿದೆ. ಮರಳುಗಾರಿಕೆಯ ಗೂಂಡಾಗಿರಿ ಎದುರು ಕೆಳಮಟ್ಟದ ಅಧಿಕಾರಿಗಳೂ ವೌನವಾಗುವುದನ್ನು ನಾವು ಕಂಡಿರುವುದರಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಅಧಿಕಾರಿಗಳನ್ನು ನೇಮಕ ಮಾಡಬೇಕು. ಈ ಮೂಲಕ ಮಾತ್ರವೇ ನಿಷೇಧ ಪರಿಣಾಮಕಾರಿಯಾಗಿಸಲು ಸಾಧ್ಯ’’ ಎಂದು ಮರವೂರು ಪ್ಯಾರಾ ನಿವಾಸಿ ಅಮೀರ್ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News