ಹೆಬ್ರಿ: ಅಕ್ರಮ ಜಾನುವಾರು ಸಾಗಾಟ
ಹೆಬ್ರಿ, ಜೂ.16: ಎರಡು ಜಾನುವಾರುಗಳನ್ನು ಆಟೊ ರಿಕ್ಷಾದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವುದನ್ನು ಜೂ.15ರ ರಾತ್ರಿ 11ಗಂಟೆಗೆ ಪತ್ತೆ ಹಚ್ಚಿರುವ ಹೆಬ್ರಿ ಪೊಲೀಸರು ಈ ಸಂಬಂಧ ಇಬ್ಬರು ಆರೋಪಿಗಳನ್ನು ಆಟೊ ರಿಕ್ಷಾದೊಂದಿಗೆ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ಕಳ್ತೂರು ಗ್ರಾಮದ ಶ್ರೀರಾಮ ಭಜನ ಮಂದಿರದ ಬಳಿ ಕಾಯುತ್ತಿದ್ದ ಪೊಲೀಸರು ರಿಕ್ಷಾವನ್ನು ನಿಲ್ಲಿಸಲು ಹೇಳಿದಾಗ ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಮುಂದೆ ಹೋಗುವಾಗ ತಿರುವಿನಲ್ಲಿ ಚಾಲಕನ ಹತೋಟಿ ತಪ್ಪಿ ರಿಕ್ಷಾ ಮಗುಚಿ ಬಿತ್ತು. ಇದರಿಂದ ರಿಕ್ಷಾದಲ್ಲಿದ್ದ ಮೂವರಲ್ಲಿ ಅಶ್ರಫ್ ಹಾಗೂ ಕೃಷ್ಣ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಸೈಪು ಎಂಬಾತ ಪರಾರಿಯಾಗಿದ್ದಾನೆ.
ರಿಕ್ಷಾವನ್ನು ಪರಿಶೀಲಿಸಿದಾಗ ಅದರ ಡಿಕ್ಕಿಯಲ್ಲಿ ಹಗ್ಗದಿಂದ ಬಿಗಿಯಲ್ಪಟ್ಟ ಎರಡು ಜಾನುವಾರುಗಳು ಪತ್ತೆಯಾದವು. ಗಾಯಗೊಂಡಿರುವ ಇಬ್ಬರು ಆರೋಪಿಗಳೊಂದಿಗೆ ಆಟೊ ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.