ಮೂಡುಬಿದಿರೆ ಪುರಸಭೆ ಸದಸ್ಯೆಯ ಮನೆಯಲ್ಲಿಯೇ ಶೌಚಾಲಯವಿಲ್ಲ!
ಮೂಡುಬಿದಿರೆ, ಜೂ.16: ಕೊರಗ ಸಮುದಾಯದ ಅಭಿವೃದ್ಧಿಗಳಿಗಾಗಿ ಸರಕಾರವು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ 18ನೆ ವಾರ್ಡ್‌ನಲ್ಲಿರುವ ದೂಜ ಕೊರಗ ಅವರ ಕುಟುಂಬ ಶೌಚಾಲಯ, ಸ್ನಾನಗೃಹ ಮುಂತಾದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.
ಕಲ್ಲಬೆಟ್ಟು ಸಮೀಪದ ನೀರಲ್ಕೆ ಗ್ರಾಮದಲ್ಲಿ ವಾಸವಾಗಿರುವ ದೂಜ ಕೊರಗರ ಮನೆಯಲ್ಲಿ ಶೌಚಾಲಯ ಹಾಗೂ ಸ್ನಾನಗೃಹದ ವ್ಯವಸ್ಥೆ ಇಲ್ಲ. ಪ್ಲಾಸ್ಟಿಕ್ ಹಾಗೂ ಗೋಣಿಚೀಲವನ್ನು ಉಪಯೋಗಿಸಿಕೊಂಡು ಮನೆಯ ಬಾಗಿಲನ್ನು ಮುಚ್ಚಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಪುರಸಭೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲವೆಂಬ ಆರೋಪವೂ ಕೇಳಿ ಬಂದಿದೆ. ದೂಜ ಕೊರಗ ದಂಪತಿಗೆ ಇಬ್ಬರು ಮಕ್ಕಳಿದ್ದು ಜೀವನೋಪಾಯಕ್ಕಾಗಿ ಬುಟ್ಟಿ ಹೆಣೆಯುವ ಕಾಯಕವನ್ನು ಮಾಡುತ್ತಿದ್ದಾರೆ. ಕಾಡುಗಳ ನಾಶ ಹೆಚ್ಚಾಗುತ್ತಿರುವುದರಿಂದ ಬುಟ್ಟಿ ಹೆಣೆಯಲು ಬಿಳಲುಗಳು ಕಡಿಮೆ ಯಾಗಿದ್ದು, ಮಕ್ಕಳು ಕೂಲಿ ಕೆಲಸವನ್ನು ಮಾಡಿ ಜೀವನ ಸಾಗಿಸಬೇಕಾದ ಅನಿವಾರ್ಯತೆಯೂ ಇದೆ. ದೂಜ ಕೊರಗ ಅವರ ಪುತ್ರಿ ಮೂಡುಬಿದಿರೆ ಪುರಸಭೆಯ 18ನೆ ವಾರ್ಡ್‌ನ ಸದಸ್ಯೆಯೂ ಆಗಿದ್ದಾರೆ.
ನೀರಲ್ಕೆಯಲ್ಲಿ ಕೊರಗ ಜನಾಂಗದ 5 ಕುಟುಂಬಗಳಿದ್ದು 10 ಹೆಂಗಸರು, 9 ಗಂಡಸರು ಹಾಗೂ ಇಬ್ಬರು ಮಕ್ಕಳು ಸೇರಿ 21 ಜನರಿದ್ದಾರೆ. ನಾಲ್ಕು ಮನೆಗಳು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದೆಯಲ್ಲದೆ ಒಂದು ಮನೆಯಲ್ಲಿ ಜೀವನೋಪಾಯಕ್ಕಾಗಿ ಮಲ್ಲಿಗೆ ಕೃಷಿಯನ್ನೂ ಮಾಡಿಕೊಂಡಿದ್ದಾರೆ. ಕೆಲವರು ಸ್ವಲ್ಪಮಟ್ಟಿನ ಶಿಕ್ಷಣವನ್ನೂ ಪಡೆದಿದ್ದಾರೆ. ಪುರಸಭಾ ಸದಸ್ಯೆಯ ಮನೆಯಲ್ಲಿಯೇ ಶೌಚಾಲಯವಿಲ್ಲ ತನ್ನ ವಾರ್ಡ್‌ನಲ್ಲಿ ಶೌಚಾಲಯ ವಿಲ್ಲದೆ ಇರುವ ಮನೆಗಳನ್ನು ಗುರುತಿಸಿ ಪುರಸಭೆಯಿಂದ ಸವಲತ್ತುಗಳನ್ನು ತೆಗೆಸಿಕೊಡುವುದು ಓರ್ವ ಪುರಸಭಾ ಸದಸ್ಯರ ಕರ್ತವ್ಯ. ಆದರೆ ಪುರಸಭಾ ಸದಸ್ಯೆಯಾಗಿರುವ ಆಶಾ ಅವರ ಮನೆಯಲ್ಲಿಯೇ ಶೌಚಾಲಯ ವಿಲ್ಲದೆ ತಮ್ಮ ಸಂಬಂಧಿಕರ ಮನೆಯನ್ನು ಆಶ್ರಯಿಸಬೇಕಾಗಿದೆ. ಅಲ್ಲದೆ ಪ್ಲಾಸ್ಟಿಕ್ ಮತ್ತು ಬಟ್ಟೆಯನ್ನು ಹೊದ್ದುಕೊಂಡಿರುವ ಸಣ್ಣ ಜೋಪಡಿಯನ್ನೇ ಸ್ನಾನಗೃಹವಾಗಿ ಉಪಯೋಗಿಸುತ್ತಿದ್ದಾರೆ. ಪುರಸಭಾ ಸದಸ್ಯೆಯೇ ಇಂತಹ ಪರಿಸ್ಥಿತಿಯಲ್ಲಿ ಇರುವಾಗ ಈ ವಾರ್ಡ್‌ನಲ್ಲಿ ಇನ್ನೆಷ್ಟು ಜನರು ಶೌಚಾಲಯ ಸಹಿತ ಇತರ ಮೂಲಭೂತ ಸೌಕರ್ಯಗಳನ್ನು ಹೊಂದಿರಬಹುದು ಎಂದು ಯೋಚಿಸ ಬೇಕಾಗಿದೆ.
ಪುರಸಭಾ ಸದಸ್ಯೆ ಸ್ವೀಪರ್: ಕಾಂಗ್ರೆಸ್ ಬೆಂಬಲದೊಂದಿಗೆ ಪುರಸಭೆಯ 18ನೆ ವಾರ್ಡ್‌ನಲ್ಲಿ ಚುನಾಯಿತರಾಗಿ ಸದಸ್ಯೆಯಾಗಿರುವ ಆಶಾ ತನ್ನ ಜೀವನೋಪಾಯಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಸ್ವೀಪರ್ ಆಗಿ ದುಡಿಯುತ್ತಿದ್ದಾರೆ. ದ್ವಿತೀಯ ಪಿಯುಸಿ ಶಿಕ್ಷಣವನ್ನು ಪಡೆದಿರುವ ಆಶಾರಿಗೆ ಸರಿಯಾದ ಉದ್ಯೋಗವಿಲ್ಲ. ಆಶಾ ಅವರನ್ನು ಪಕ್ಷವು ಅಭ್ಯರ್ಥಿಯಾಗಿ ಆಯ್ಕೆ ಮಾಡಿಕೊಂಡಾಗ ಅವರಿಗೆ ಉದ್ಯೋಗ ನೀಡುವುದಾಗಿ ಹೇಳಿತ್ತು ಎನ್ನಲಾಗಿದೆ. ಆದರೆ ಇದೀಗ ಪುರಸಭಾ ಸದಸ್ಯೆಯಾಗಿ ಎರಡೂವರೆ ವರ್ಷಗಳು ಕಳೆದರೂ ಇನ್ನು ಸರಿಯಾದ ಉದ್ಯೋಗವನ್ನು ನೀಡದೆ ಇರುವುದು ವಿಪರ್ಯಾಸ.
ಪುರಸಭಾ ಸದಸ್ಯೆಯಾಗಿರುವ ಆಶಾರ ಮನೆಯಲ್ಲಿ ಶೌಚಾಲಯ ಹಾಗೂ ಸ್ನಾನಗೃಹವಿಲ್ಲದಿರುವ ಬಗ್ಗೆ ತನ್ನ ಗಮನಕ್ಕೆ ಈವರೆಗೆ ಬಂದಿಲ್ಲ. ಅಲ್ಲದೆ ಸದಸ್ಯೆಯಾಗಿರುವ ಆಶಾ ಕೂಡ ಈ ಬಗ್ಗೆ ತಿಳಿಸಿಲ್ಲ. ಮುಂದಿನ ಮಾಸಿಕ ಸಭೆಯಲ್ಲಿ ಈ ಬಗ್ಗೆ ವಿಚಾರಿಸಿ ಮನವಿಯನ್ನು ಪಡೆದು ಶೌಚಾಲಯ ನಿರ್ಮಾಣ, ಸ್ನಾನಗೃಹ ಹಾಗೂ ಮನೆ ದುರಸ್ತಿಗಾಗಿ ಅನುದಾನವನ್ನು ನೀಡಲಾಗುವುದು.
-ರೂಪಾ ಎಸ್.ಶೆಟ್ಟಿ, ಅಧ್ಯಕ್ಷರು, ಪುರಸಭೆ ಮೂಡುಬಿದಿರೆ.