ವಿಟ್ಲ: ಸ್ವಂತ ಮನೆಯಿದ್ದರೂ ಗೃಹ ಪ್ರವೇಶದಿಂದ ವಂಚಿತವಾದ ದಲಿತ ಕುಟುಂಬ

Update: 2016-06-17 12:36 GMT

ವಿಟ್ಲ, ಜೂ.17: ಖಾಸಗಿ ವ್ಯಕ್ತಿಯೋರ್ವರು ರಸ್ತೆ ಅತಿಕ್ರಮಿಸಿಕೊಂಡ ಪರಿಣಾಮ ದಲಿತ ಕುಟುಂಬವೊಂದು ಗೃಹ ಪ್ರವೇಶದಿಂದ ವಂಚಿತಗೊಂಡಿದೆ ಎಂಬ ಆರೋಪ ಕೇಳಿಬಂದಿದೆ.

ಸ್ಥಳೀಯ ನಿವಾಸಿ ದಿವಂಗತ ಬಾಬು ನಲಿಕೆ ಎಂಬವರ ಪುತ್ರ ಸುಂದರ ನಲಿಕೆ-ಕಲ್ಯಾಣಿ ದಂಪತಿ 13 ಸೆಂಟ್ಸ್ ಸ್ವಂತ ಜಮೀನು ಹೊಂದಿದ್ದರೂ ಸಂಪರ್ಕ ರಸ್ತೆ ಇಲ್ಲದೆ ಮನೆ ನಿರ್ಮಿಸಲು ಅಸಾಧ್ಯವಾಗಿತ್ತು. ಆರಂಭದಲ್ಲಿ ಸ್ಥಳೀಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘವು ತಗಡು ಶೀಟಿನ ತಾತ್ಕಾಲಿಕ ಮನೆ ನಿರ್ಮಿಸಿ ಕೊಟ್ಟಿತ್ತು. ಕಳೆದ ಎರಡು ವರ್ಷಗಳ ಹಿಂದೆ ಸರಕಾರ ಬಸವ ವಸತಿ ಯೋಜನೆಯಡಿ 1.20 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಪಂಚಾಂಗ, ಗೋಡೆ, ಮಾಡು ನಿರ್ಮಾಣಕ್ಕೆ ತಲಾ 30 ಸಾವಿರ ರೂಪಾಯಿಯಂತೆ ಒಟ್ಟು ಮೂರು ಕಂತುಗಳು ದೊರೆತಿದೆ. ಆದರೆ ಈ ಮನೆಗೆ ಸಂಪರ್ಕಿಸುವ ಸರಕಾರಿ ರಸ್ತೆ ಜಮೀನನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿದ್ದಾರೆ. ಇದರಿಂದಾಗಿ ಗೃಹ ನಿರ್ಮಾಣ ಸಂದರ್ಭದಲ್ಲಿ ಅಗತ್ಯ ಸಾಮಾಗ್ರಿಗಳನ್ನು ಯಾರ್ಯಾರದೋ ಗದ್ದೆ, ಅಡಿಕೆ ತೋಟಗಳನ್ನು ಹಾದುಕೊಂಡು ಹೊತ್ತು ತರುವಂತಾಗಿದೆ ಎಂದು ಸುಂದರ ನಲಿಕೆ ತಮ್ಮ ನೋವನ್ನು ಹೇಳಿಕೊಳ್ಳುತ್ತಾರೆ.

ಇಲ್ಲಿನ ರಸ್ತೆ ಅತಿಕ್ರಮಣ ತೆರವುಗೊಳಿಸಿ, ಗೃಹ ನಿರ್ಮಾಣ ಕಾಮಗಾರಿ ಹಾಗೂ ಕುಡಿಯುವ ನೀರು ಪೂರೈಸುವುದಕ್ಕೆ ಕೆದಿಲ ಗ್ರಾಮ ಪಂಚಾಯತ್‌ಗೆ ಇನ್ನೂ ಸಾಧ್ಯವಾಗಿಲ್ಲ. ಸದ್ಯ ಸ್ಥಳೀಯ ನಿವಾಸಿ ಸುಲೈಮಾನ್ ಎಂಬವರು ಈ ದಲಿತ ದಂಪತಿಗೆ ಕುಡಿಯುವ ನೀರು ಒದಗಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಈ ಬಗ್ಗೆ ಕೆದಿಲ ಗ್ರಾಮ ಪಂಚಾಯತ್ ಪಿಡಿಒ ಹಾಗೂ ದಲಿತ ಮುಖಂಡ ಸೇಸಪ್ಪಬೆದ್ರಕಾಡು ಎಂಬವರಿಗೆ ಈ ದಲಿತ ದಂಪತಿ ದೂರು ನೀಡಿದ್ದು, ಉಳಿದಂತೆ ಮೇಲಧಿಕಾರಿ ಮಟ್ಟದಲ್ಲಿ ದೂರು ನೀಡಲು ಯಾವುದೇ ತಿಳುವಳಿಕೆ ನಮ್ಮಲ್ಲಿ ಇಲ್ಲ ಎಂದು ಈ ಬಡ ಕುಟುಂಬ ಹೇಳಿಕೊಂಡಿದೆ.

ಈ ದಲಿತ ಕುಟುಂಬಕ್ಕೆ ಇಳಿ ವಯಸ್ಸಿನಲ್ಲಿ ಮಕ್ಕಳಿಲ್ಲದ ಕೊರಗು ಒಂದೆಡೆಯಾದರೆ, ವಾಸವಾಗಿರುವ ಜೋಪಡಿಯ ಸಮೀಪದಲ್ಲೇ ಸಾರಣೆ ಕಾಣದ ಕಾಂಕ್ರೀಟು ಮನೆ ನಿರ್ಮಾಣ ಸಾಧ್ಯವಾಗಿದ್ದರೂ ದಾರಿ ಸಮಸ್ಯೆಯಿಂದ ಗೃಹಪ್ರವೇಶ ಸಾಧ್ಯವಾಗದ ಕೊರಗು ಇನ್ನೊಂದೆಡೆ ಕಾಡುತ್ತಿದೆ. ಈ ಮಧ್ಯೆ ಇದೇ ಚಿಂತೆಯಿಂದ ಸುಂದರ ನಲಿಕೆ ಅವರು ಕ್ಷಯಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಕೇವಲ ಬೀಡಿ ಕಟ್ಟಿಕೊಂಡು ಪ್ಲಾಸ್ಟಿಕ್ ಹಾಸಿದ ಪುಟ್ಟ ಕುಟೀರದಲ್ಲೇ ಬದುಕು ಮುನ್ನಡೆಸುವಂತಾಗಿದೆ ಎಂದು ಇವರ ಪತ್ನಿ ಕಲ್ಯಾಣಿ ತಮ್ಮ ಮನದಾಳದ ನೋವನ್ನು ವ್ಯಕ್ತಪಡಿಸಿದ್ದಾರೆ.

ಇಲ್ಲಿನ ನ್ಯಾಯವಂಚಿತ ದಲಿತ ಕುಟುಂಬಕ್ಕೆ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ತಕ್ಷಣ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಹಾಗೂ ತಾಲೂಕು ತಹಶೀಲ್ದಾರರು ಮುಂದಾಗಬೇಕು. ರಸ್ತೆ ಅತಿಕ್ರಣವನ್ನು ತ್ವರಿತವಾಗಿ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News