ಬಾರದ ಅಚ್ಛೇ ದಿನ್ : ಯುವಜನತೆಯ ಬೆಂಬಲ ಕಳೆದುಕೊಳ್ಳುತ್ತಿರುವ ಪ್ರಧಾನಿ ಮೋದಿ

Update: 2016-06-17 12:15 GMT

ನವದೆಹಲಿ : ಕಳೆದ ಲೋಕಸಭಾ ಚುನಾವಣೆ ಸಂದರ್ಭ ನಡೆಸಲಾದ ಸಮೀಕ್ಷೆಯೊಂದರಲ್ಲಿ 18 ರಿಂದ 22 ರ ಹರೆಯದ ಯುವಕರಲ್ಲಿ ಶೇ 47 ರಷ್ಟು ಮಂದಿ ಮೋದಿಯನ್ನು ಪ್ರಧಾನಿಯಾಗಿ ಬೆಂಬಲಿಸಿದ್ದರು ಎಂದು ತಿಳಿದು ಬಂದಿತ್ತಲ್ಲದೆ ಮೋದಿಯವರ ಅಭೂತಪೂರ್ವ ಗೆಲುವಿನಲ್ಲಿ ಯುವಜನತೆಯ ಪಾತ್ರ ದೊಡ್ಡದಾಗಿತ್ತು. ಆದರೆ ಎರಡು ವರ್ಷಗಳ ನಂತರ ಮೋದಿಯವರ ಜನಪ್ರಿಯತೆ ಕ್ಷೀಣಿಸುತ್ತಿದ್ದು ಇತ್ತೀಚೆಗೆ ನಡೆದ ಅಸ್ಸಾಂ, ಬಿಹಾರ, ದೆಹಲಿ, ಕೇರಳ, ತಮಿಳು ನಾಡು ಹಾಗೂ ಪಶ್ಚಿಮ ಬಂಗಾಳ ಚುನಾವಣೆಗಳಲ್ಲಿ ಪ್ರಥಮ ಬಾರಿ ಮತ ಚಲಾಯಿಸಿದವರ ಸಂಖ್ಯೆ ಹೆಚ್ಚಿದ್ದ ಕ್ಷೇತ್ರಗಳಲ್ಲಿ ಬಿಜೆಪಿಯ ನಿರ್ವಹಣೆ ತೀರಾ ಕಳಪೆಯಾಗಿದೆ.

ಶೇಕಡಾ ಐದಕ್ಕಿಂತಲೂ ಹೆಚ್ಚು ಪ್ರಥಮ ಬಾರಿ ಮತ ಚಲಾಯಿಸುವವರಿದ್ದ ಕಡೆಗಳಲ್ಲಿ ಬಿಜೆಪಿಯ ಮತ ಹಂಚಿಕೆ ಶೇ 4 ರಷ್ಟು ಕಡಿಮೆಯಾಗಿದೆ ಎಂದು ಅಂಕಿಸಂಖ್ಯೆಗಳು ಹೇಳುತ್ತವೆ. ಆದರೆ ರಾಜ್ಯ ಚುನಾವಣೆಗಳು ಹಾಗೂ ರಾಷ್ಟ್ರೀಯ ಚುನಾವಣೆಗಳನ್ನು ಒಂದೇ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲವಾದರೂ ಹೆಚ್ಚಿನರಾಜ್ಯಗಳಲ್ಲಿ ಬಿಜೆಪಿ ಪ್ರಧಾನಿ ಮೋದಿಯವರ ಹೆಸರು ಹೇಳಿಯೇ ಚುನಾವಣಾ ಪ್ರಚಾರ ನಡೆಸಿದೆ. ಮೇಲಾಗಿ ಪ್ರಧಾನಿ ಕೂಡ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ತಮ್ಮ ಚುನಾವಣಾ ಪ್ರಚಾರದಲ್ಲಿ ಅಚ್ಛೇ ದಿನ್ ಭರವಸೆ ನೀಡಿ 10 ಮಿಲಿಯನ್ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ಮೋದಿ ನೀಡಿದ್ದರೂ ಎರಡು ವರ್ಷಗಳ ತರುವಾಯಆ ಭರವಸೆಗಳು ಈಡೇರದೇ ಇರುವುದು ಯುವಜನತೆಯಲ್ಲಿ ಭ್ರಮನಿರಸನ ಮೂಡಿಸಿದೆಯೆಂಬುದು ಸುಳ್ಳಲ್ಲ. ಮೇಲಾಗಿ ಮೋದಿಯವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಇನ್ನೂ ಸಮಯಾವಕಾಶ ಬೇಕಾಗಿದೆ. ಬಿಜೆಪಿ ಆಡಳಿತದ ಗುಜರಾತ್ ಹಾಗೂ ಹರ್ಯಾನಾದಲ್ಲಿನಡೆದ ಮೀಸಲಾತಿ ಚಳುವಳಿಗಳು ಕೂಡ ಯುವಜನರ ಸಿಟ್ಟನ್ನು ಹೊರಗೆಡಹಿವೆ.

ಇನ್ನು ಮೂರು ವರ್ಷಗಳಲ್ಲಿ ಮೋದಿಯವರು ಮತ್ತೆ ಚುನಾವಣೆ ಎದುರಿಸುವಾಗ ಮತ್ತೆ 125 ಮಿಲಿಯನ್ ಹೆಚ್ಚುವರಿ ಯುವ ಮತದಾರರು ಸೇರ್ಪಡೆಗೊಳ್ಳಲಿದ್ದಾರೆ. ಹೀಗಿರುವಾಗ ಮೋದಿಯವರು ಮುಂದಿನ ದಿನಗಳಲ್ಲಿ ತಮ್ಮ ಅಚ್ಛೇ ದಿನ್ ಭರವಸೆ ಈಡೇರಿಸದೇ ಹೋದಲ್ಲಿ ಅದು ಅವರ ಪಕ್ಷಕ್ಕೆ ಮುಳುವಾಗುವ ಸಂಭವವಿದೆಯೆಂದು ರಾಜಕೀಯ ಪಂಡಿತರು ಅಭಿಪ್ರಾಯ ಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News