×
Ad

ಪುತ್ತೂರು: ತಾಲೂಕಿನಲ್ಲಿ ಹೆಚ್ಚುತ್ತಿವೆ ಡೆಂಗ್ ಪ್ರಕರಣಗಳು

Update: 2016-06-17 18:09 IST

ಪುತ್ತೂರು, ಜೂ.17: ಮುಂಗಾರು ಮಳೆ ಕಣ್ಣು ಮುಚ್ಚಾಲೆ ಆಟದಿಂದಾಗಿ ಸರಿಯಾಗಿ ಬಾರದೆ ಒಂದೆಡೆ ಗದ್ದೆ ಬೇಸಾಯಗಾರರು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಇನ್ನೊಂದೆಡೆ ಸೊಳ್ಳೆಗಳಿಂದ ಉಂಟಾಗುತ್ತಿರುವ ಡೆಂಗ್ ಜ್ವರ ಪ್ರಕರಣ ಹೆಚ್ಚಾಗುತ್ತಿದೆ. ಪುತ್ತೂರಿನ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಹುತೇಕ ಜ್ವರ ಪೀಡಿತರು ದಾಖಲಾಗಿದ್ದಾರೆ.

ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ 13, ನಗರದ ಖಾಸಗಿ ಆಸ್ಪತ್ರೆಯಲ್ಲಿ 118 ಡೆಂಗ್ ಪ್ರಕರಣಗಳು ಪತ್ತೆಯಾಗಿದೆ. ಪುತ್ತೂರು ತಾಲೂಕಿನಲ್ಲಿ ಒಟ್ಟು 253 ಜ್ವರ ಪ್ರಕರಣಗಳು ಕಂಡುಬಂದಿದ್ದು, ಈ ಪೈಕಿ 232 ಡೆಂಗ್ ಎಂದು ದೃಢಪಟ್ಟಿದೆ. ನಗರದ ಆಸ್ಪತ್ರೆಗಳಲ್ಲಿ ಜ್ವರ ಪೀಡಿತರ ದಾಖಲಾತಿ ಸಂಖ್ಯೆ 131ಕ್ಕೇರಿದೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮಾಂತರ ಭಾಗದಲ್ಲೇ ಹೆಚ್ಚು ಜ್ವರ ಪೀಡಿತರಿದ್ದಾರೆ. ಗ್ರಾಮೀಣ ಪ್ರದೇಶಗಳಾದ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 62, ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 34, ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 30 ಶಂಕಿತ ಡೆಂಗ್ ಜ್ವರ ಪ್ರಕರಣ ಕಂಡುಬಂದಿದೆ. ಈ ಪೈಕಿ 27 ಪ್ರಕರಣ ಡೆಂಗ್ ಎಂಬುದು ದೃಢಪಟ್ಟಿದೆ.

ಈಶ್ವರಮಂಗಲದಲ್ಲಿ 4, ಕಡಬದಲ್ಲಿ 63, ಕಾಣಿಯೂರು 38, ಕೊಲ 32, ಕೊಳ್ತಿಗೆ 13, ನೆಲ್ಯಾಡಿ 12, ಪಾಣಾಜೆ 19, ಸರ್ವೆ 7, ಶಿರಾಡಿ 18, ತಿಂಗಳಾಡಿ 16, ಉಪ್ಪಿನಂಗಡಿಯಲ್ಲಿ 14, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 18 ಪ್ರಕರಣಗಳು ಕಂಡುಬಂದಿದೆ. ಕುಮಾರಧಾರ ನದಿಯ ಇಕ್ಕೆಲಗಳಲ್ಲಿರುವ ಕಡಬ, ಕಾಣಿಯೂರು, ಕೊಲ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿದೆ. ಪುತ್ತೂರು ಸರಕಾರಿ ಆಸ್ಪತ್ರೆಯೊಂದರಲ್ಲೇ ದಿನಕ್ಕೆ 70ಕ್ಕಿಂತಲೂ ಅಧಿಕ ಮಂದಿ ಜ್ವರ ಪೀಡಿತರು ಆಗಮಿಸಿ ಔಷಧಿ ಪಡೆದು ಮನೆಗೆ ತೆರಳುತ್ತಿದ್ದಾರೆ. ವಾರದ ಹಿಂದೆ ದಿನಕ್ಕೆ 100ಕ್ಕೂ ಅಧಿಕ ಮಂದಿ ಜ್ವರ ಪೀಡಿತರು ಆಸ್ಪತ್ರೆಗೆ ಆಗಮಿಸಿ ಔಷಧಿ ಪಡೆದುಕೊಂಡು ತೆರಳಿದ್ದಾರೆ.

ಡೆಂಗ್ ಜ್ವರದ ಜೊತೆಗೆ ಇಲಿಜ್ವರವೂ ಲಗ್ಗೆಯಿಟ್ಟಿದೆ. ನಗರದಲ್ಲಿ 3, ತಿಂಗಳಾಡಿಯಲ್ಲಿ 1, ಶಿರಾಡಿ 2, ಸರ್ವೆ 1, ಪಾಣಾಜೆ 1, ನೆಲ್ಯಾಡಿ 1, ಕೊಳ್ತಿಗೆ 2, ಕೊಲ 2, ಕಾಣಿಯೂರು 3 ಇಲಿಜ್ವರ ಕಂಡುಬಂದಿದ್ದು, ಒಟ್ಟು 16 ಪ್ರಕರಣಗಳು ದಾಖಲಾಗಿದೆ. ಕಟ್ಟಡ ಕಾರ್ಮಿಕರ ಮೂಲಕ ಹರಡುತ್ತಿರುವ ಮಲೇರಿಯಾ ನಗರದಲ್ಲೇ ಹೆಚ್ಚು. ತಾಲೂಕಿನಲ್ಲಿ ಒಟ್ಟು 9 ಪ್ರಕರಣಗಳು ಕಂಡುಬಂದಿದೆ. ಈ ಪೈಕಿ ಮೇ ತಿಂಗಳಿನಲ್ಲಿ 6 ಹಾಗೂ ಜೂನ್‌ನಲ್ಲಿ 3 ಪ್ರಕರಣ ದಾಖಲಾಗಿದ್ದು, ಪುತ್ತೂರು ನಗರದಲ್ಲಿ 3, ತಿಂಗಳಾಡಿ, ಕಾಣಿಯೂರು, ಕಡಬದಲ್ಲಿ ತಲಾ 1 ಪ್ರಕರಣ ಕಂಡುಬಂದಿದೆ. 

ಗ್ರಾಮೀಣ ಪ್ರದೇಶಗಳಿಗೆ ವಿಶೇಷ ಗಮನ ನೀಡಿರುವ ಆರೋಗ್ಯ ಇಲಾಖೆ, ಈಗಾಗಲೇ 1,286 ಮನೆಯ ಪರಿಸರದಲ್ಲಿ ಫಾಗಿಂಗ್ ಕಾರ್ಯ ನಡೆಸಿದೆ. ಕರಪತ್ರ ಹಂಚಿ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದೆ. ಆಶಾ ಕಾರ್ಯಕರ್ತೆಯರನ್ನು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲೇ ಜ್ವರ ಪ್ರಕರಣ ಹೆಚ್ಚಿದ್ದು, ಡೆಂಗ್ ಜ್ವರವೂ ಗ್ರಾಮೀಣ ಭಾಗದಲ್ಲೇ ಹೆಚ್ಚು. ಶಂಕಿತ ಪ್ರಕರಣಗಳನ್ನು ಮಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗುತ್ತಿದೆ. ಭಯಪಡುವಂತಹ ಪರಿಸ್ಥಿತಿ ಇದೆ. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯಿಂದ ಹಿಡಿದು, ಔಷಧಿ, ಸಲಕರಣ ಯಾವುದರಲ್ಲೂ ಕೊರತೆ ಇಲ್ಲ. ಒಂಬತ್ತು ವೈದ್ಯರ ಪೈಕಿ 3 ವೈದ್ಯರ ಕೊರತೆ ಇದೆ. ಆದರೆ ಜ್ವರ ಪ್ರಕರಣ ನಿಭಾಯಿಸುವಲ್ಲಿ ಸಮಸ್ಯೆಯಾಗಿಲ್ಲ.

-ಡಾ.ಪ್ರದೀಪ್, ಆಡಳಿತ ವೈದ್ಯಾಧಿಕಾರಿ, ಪುತ್ತೂರು ಸರಕಾರಿ ಆಸ್ಪತ್ರೆ.

ಹಿಂದಿನ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಜ್ವರ ಪ್ರಮಾಣ ಕಡಿಮೆ ಇದೆ. ಗ್ರಾಮೀಣ ಭಾಗದಲ್ಲಿ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಫಾಗಿಂಗ್ ನಡೆಸಲಾಗಿದೆ. ಭಯ ಪಡುವ ಅವಶ್ಯಕತೆ ಇಲ್ಲ.

-ಡಾ.ಅಶೋಕ್ ರೈ, ತಾಲೂಕು ಆರೋಗ್ಯಾಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News