×
Ad

ಉಪವಾಸದಿಂದ ಅಂತರಂಗ ಹಾಗೂ ಬಹಿರಂಗ ಶುದ್ಧಿ ಸಾಧ್ಯ: ಶಾಸಕ ಜೆ.ಆರ್.ಲೋಬೊ

Update: 2016-06-17 18:18 IST

ಮಂಗಳೂರು, ಜೂ.17: ಉಪವಾಸ ಆಚರಣೆಯಿಂದ ಮಾನವನ ಅಂತರಂಗ ಹಾಗೂ ಬಹಿರಂಗ ಶುದ್ಧಿಯಾದರೆ, ದೇವರ ಇರುವಿಕೆಯ ಚಿಂತನೆಗೆ ಸಹಕಾರಿಯಾಗುತ್ತದೆ. ದೇವಭಯದಿಂದ ಜೀವಿಸಿದರೆ ಮಾನವನು ಸಮಾಜಕ್ಕೆ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.

ನಗರದ ಬಂದರ್ನಲ್ಲಿರುವ ಹಿದಾಯತ್ ಸೆಂಟರ್ನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಆಯೋಜಿಸಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇವರು ಒಬ್ಬನೇ. ಆದರೂ ಬೇರೆ ಬೇರೆ ರೂಪದಲ್ಲಿ ವಿವಿಧ ಧರ್ಮೀಯರು ಆರಾಧಿಸುತ್ತಾರೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಬದುಕುವಾಗ ಎಲ್ಲಾ ಧರ್ಮದ ಬಗ್ಗೆ ತಿಳಿದುಕೊಂಡು ಪರಸ್ಪರ ಸಹಕಾರ, ಸೌಹಾರ್ದದಿಂದ ಬದುಕಬೇಕಾದರೆ ಇಂತಹ ಕೂಟಗಳು ಎಲ್ಲಾ ಧರ್ಮೀಯರ ಹಬ್ಬದ ದಿನ ಸೇರಿದಂತೆ ವಿವಿಧ ವಿಶೇಷ ಸಂದರ್ಭದಲ್ಲಿ ನಡೆದರೆ ಸಾಮರಸ್ಯ ಖಂಡಿತಾ ನೆಲೆ ನಿಲ್ಲುತ್ತದೆ ಎಂದು ಹೇಳಿದರು.

ಅತಿಥಿಯಾಗಿ ಮಾತನಾಡಿದ ದ.ಕ. ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳಲ್ಲೂ ಬಡವರ ಸೇವೆಗೆ ಆದ್ಯತೆ ನೀಡಲಾಗಿದೆ. ಇಂದು ಸಾಮರಸ್ಯದಿಂದ ಬದುಕಬೇಕಾದರೆ ಸಜ್ಜನಿಕೆಯ ದಾರಿಯಲ್ಲಿ ನಡೆಯುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಿಸಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮನಪಾ ಮೇಯರ್ ಹರಿನಾಥ್, ಉಪನ್ಯಾಸಕ ಒ.ಆರ್.ಪ್ರಕಾಶ್, ವಕ್ಫ್ ಮಂಡಳಿ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಶಿರಸಿ ಸಾರಿಗೆ ಅಧಿಕಾರಿ ಮುಗಳವಳ್ಳಿ ಕೇಶವ ಧರಣಿ, ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚೆಂಗಪ್ಪ, ಬೊಕ್ಕಪಟ್ಣ ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ವಾಸುದೇವ ಬೆಳ್ಳೆ, ಸದ್ಭಾವನಾ ವೇದಿಕೆ ಸದಸ್ಯ ದೀಪಕ್ ಡಿಸೋಜ ಮತ್ತಿತರರು ಮಾತನಾಡಿದರು.

ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಅಧ್ಯಕ್ಷ ಮುಹಮ್ಮದ್ ಕುಂಞಿ ರಮಝಾನ್ ಸಂದೇಶ ನೀಡಿದರು. ಅಬ್ದುಲ್ಲತೀಫ್ ಆಲಿಯಾ ಕಿರಾಅತ್ ಪಠಿಸಿದರು. ಮುಹಮ್ಮದ್ ಇಸ್ಹಾಕ್ ಪುತ್ತೂರು ಪ್ರಸ್ತಾವನೆಗೈದರೆ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಂ ಉಪ್ಪಿನಂಗಡಿ ಸಮಾರೋಪ ಭಾಷಣ ಮಾಡಿದರು. ಸರ್ಫರಾಝ್ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News