×
Ad

ಕಾಸರಗೋಡು: ಸಂಪೂರ್ಣ ಹದಗೆಟ್ಟ ಸೀತಾಂಗೋಳಿ-ವಿದ್ಯಾನಗರ ರಸ್ತೆ

Update: 2016-06-17 18:42 IST

ಕಾಸರಗೋಡು, ಜೂ.17: ಪೂರ್ಣವಾಗಿ ಹದೆಗೆಟ್ಟ ಸೀತಾಂಗೋಳಿ ವಿದ್ಯಾನಗರ ರಸ್ತೆ ದುರಸ್ತಿ ಕಾಮಗಾರಿಗೆ ಸೆಪ್ಟಂಬರ್ 1ರಂದು ಚಾಲನೆ ಲಭಿಸಲಿದೆ. ಈಗಾಗಲೇ ಈ ರಸ್ತೆಗೆ 32 ಕೋಟಿ ರೂ. ಮಂಜೂರಾಗಿದ್ದು, ಸುಮಾರು ಒಂಬತ್ತೂವರೆ ಕಿ.ಮೀ. ಉದ್ದದ ಈ ರಸ್ತೆಯನ್ನು ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಪುನರ್‌ನಿರ್ಮಾಣಗೊಳ್ಳಲಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನಾ ಪ್ಯಾಕೇಜ್ ಮೂಲಕ  ರಸ್ತೆ ದುರಸ್ತಿಗೊಳ್ಳಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ಮಳೆಗಾಲದ ಮೊದಲು ಪೂರ್ಣಗೊಳಿಸುವ ಯೋಜನೆ ಹೊಂದಿದೆ. ಈ ರಸ್ತೆಯು ಕಾಸರಗೋಡಿನಿಂದ ವಿದ್ಯಾನಗರ ಜಂಕ್ಷನ್ ಮೂಲಕ ಹಾದು ಹೋಗುತ್ತಿದ್ದು, ಎಚ್ಎಎಲ್, ಕೈಗಾರಿಕಾ ಘಟಕ, ಮಾಯಿಪ್ಪಾಡಿ ಡಯೆಟ್ , ಮಾಯಿಪ್ಪಾಡಿ ಅರಮನೆ, ಹಲವು ಶೈಕ್ಷಣಿಕ ಸಂಸ್ಥೆಗಳು ಮೊದಲಾದವುಗಳಿಗೆ ಸಂಪರ್ಕ ರಸ್ತೆಯಾಗಿದೆ. ಮಾತ್ರವಲ್ಲದೆ, ಪೆರ್ಮುದೆ, ಪೆರ್ಲ, ಬಾಡೂರು ಮೊದಲಾದ ಕಡೆಗಳಿಂದ ಪ್ರಯಾಣಿಕರಿಗೆ ಸುಲಭವಾಗಿ ಕಾಸರಗೋಡಿಗೆ ತಲಪುವ ರಸ್ತೆಯಾಗಿದೆ.

ಕಳೆದ ಎರಡು ವರ್ಷಗಳಿಂದ ಈ ರಸ್ತೆ ಪ್ರಯಾಣಿಕರಿಗೆ ನರಕಸದೃಶವಾಗಿ ಪರಿಣಮಿಸಿದೆ. ರಸ್ತೆ ಅವ್ಯವಸ್ಥೆ ಬಗ್ಗೆ ಹಲವು ಪ್ರತಿಭಟನೆಗಳು ಕೂಡಾ ನಡೆದಿವೆ. ಕಳೆದ ಮಾರ್ಚ್ ತಿಂಗಳಲ್ಲಿ ನಾಗರಿಕರು ಒಂದು ದಿನ ರಸ್ತೆ ತಡೆ ನಡೆಸಿ ಪ್ರತಿಭಟನೆ ಕೂಡಾ ನಡೆಸಿದ್ದರು. ಈ ಸಂದರ್ಭ ಮಳೆಗಾಲದ ಮೊದಲು ರಸ್ತೆ ದುರಸ್ತಿಗೊಳಿಸುವ ಭರವಸೆ ಲಭಿಸಿತ್ತು. ಆದರೆ ಟೆಂಡರ್ ಪ್ರಕ್ರಿಯೆ ವಿಳಂಬಗೊಂಡ ಹಿನ್ನಲೆಯಲ್ಲಿ ಕಾಮಗಾರಿ ಮೊಟಕುಗೊಂಡಿತ್ತು. ಇದೀಗ ಮಳೆಗಾಲ ಮುಗಿಯುತ್ತಿದ್ದಂತೆ ಕಾಮಗಾರಿ ಆರಂಭಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ ಈ ರಸ್ತೆ ಪ್ರಮುಖ ವಿಷಯವಾಗಿ ಮಾರ್ಪಟ್ಟಿತ್ತು . ಆದರೆ ಚುನಾವಣೆ ಕಳೆದರೂ ಮಳೆಗಾಲದ ಮೊದಲು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಾಧ್ಯವಾಗಿಲ್ಲ.

ರಸ್ತೆ ಅವ್ಯವಸ್ಥೆಯಿಂದ ಮೊಟಕುಗೊಳ್ಳುತ್ತಿರುವ ಸಂಚಾರ

ಸೀತಾಂಗೋಳಿ-ವಿದ್ಯಾನಗರ ನಡುವಿನ ರಸ್ತೆ ಸಂಪೂರ್ಣ ಹದೆಗೆಟ್ಟಿರುವ ಪರಿಣಾಮ ವಾಹನ ಸಂಚಾರ ಮೊಟಕುಗೊಳ್ಳುತ್ತಿದೆ. ಹತ್ತಕ್ಕೂ ಅಧಿಕ ಬಸ್ಸುಗಳು ಇತರ ವಾಹನಗಳು ಈ ದಾರಿಯಲ್ಲಿ ಸಂಚಾರ ನಡೆಸುತ್ತಿದ್ದು, ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಉಳಿಯತ್ತಡ್ಕ ಜಂಕ್ಷನ್ನಲ್ಲಿ ದೊಡ್ಡ ಗಾತ್ರದ ಹೊಂಡಗಳು ಉಂಟಾಗಿದ್ದು, ಈ ರಸ್ತೆಯಲ್ಲಿ ಲಘು ವಾಹನಗಳು ಸಂಚರಿಸಲಾಗದ ಸ್ಥಿತಿ ಉಂಟಾಗಿದೆ. ಬಸ್ಸು ಸಂಚಾರ ಕೂಡಾ ಮೊಟಕುಗೊಳಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದ್ದು, ಬಿಡಿ ಭಾಗಗಳೇ ಕಳಚಿ ಹೋಗುತ್ತಿದೆ. ದಿನಂಪ್ರತಿ ಬಸ್ಸುಗಳಿಗೆ ದುರಸ್ತಿ ಬರುತ್ತಿರುವುದರಿಂದ ನಷ್ಟ ಸಹಿಸಿ ಸಂಚಾರ ನಡೆಸದ ಸ್ಥಿತಿ ಉಂಟಾಗಿದೆ. ಮಳೆ ಕಡಿಮೆಯಾಗುವವರೆಗೆ ದುರಸ್ತಿ ನಡೆಸುವಂತಿಲ್ಲ. ಸೆಪ್ಟಂಬರ್ ಒಂದರಿಂದ ರಸ್ತೆ ಅಗಲ ಹಾಗೂ ಇನ್ನಿತರ ಕಾಮಗಾರಿ ನಡೆಯಲಿದೆ. ಡಿಸೆಂಬರ್ ಬಳಿಕವಷ್ಟೇ ಡಾಮರೀಕರಣ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News