×
Ad

ದೇರಳಕಟ್ಟೆ: ನಿಟ್ಟೆ ವಿ.ವಿ.ಯಲ್ಲಿ ‘ಶೈಕ್ಷಣಿಕ ಸಂಸ್ಥೆಗಳು-ಕೈಗಾರಿಕೆಗಳ ನಡುವೆ ಕೊಡುಕೊಳ್ಳುವಿಕೆ’ ವಿಚಾರ ವಿನಿಮಯ

Update: 2016-06-17 19:54 IST

ಕೊಣಾಜೆ, ಜೂ.17: ಸಂಶೋಧನೆ ಹಾಗೂ ತಂತ್ರಜ್ಞಾನವು ದೇಶದ ಭದ್ರತೆ ಹಾಗೂ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಮಹತ್ವ ಪಡೆದಿದ್ದು ಆ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಕೈಗಾರಿಕೆಗಳ ಜೊತೆಗೆ ತಂತ್ರಜ್ಞಾನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರಿಂದ ಎರಡೂ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಹಾಗೂ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದು ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಸಲಹೆಗಾರ ಡಾ.ಎ.ಎಸ್.ನಿನ್ನಾವೆ ಹೇಳಿದರು.

ದೇರಳಕಟ್ಟೆಯ ನಿಟ್ಟೆ ವಿ.ವಿ.ಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ನಿಟ್ಟೆ ವಿಶ್ವವಿದ್ಯಾಲಯದ ಪನೀರ್ ಕ್ಯಾಂಪಸ್‌ನಲ್ಲಿರುವ ವಿಜ್ಞಾನ ಅಧ್ಯಯನ ಮತ್ತು ಸಂಶೋಧನೆ ವಿಭಾಗ ಹಾಗೂ ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಜಂಟಿ ಆಶ್ರಯದಲ್ಲಿ ‘ಶೈಕ್ಷಣಿಕ ಸಂಸ್ಥೆಗಳು-ಕೈಗಾರಿಕೆಗಳ ನಡುವೆ ಕೊಡುಕೊಳ್ಳುವಿಕೆ’ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಭಾರತ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಆರಂಭಗೊಂಡಾಗ ಅದು ಸೀಮಿತ ಕ್ಷೇತ್ರಗಳಿಗಷ್ಟೇ ಅನುದಾನ ಒದಗಿಸುತ್ತಿತ್ತು. ಮುಂದಕ್ಕೆ ಅನುದಾನ ಹೆಚ್ಚಿಸುತ್ತಾ ಬಹಳಷ್ಟು ಕ್ಷೇತ್ರಗಳಿಗೆ ಸಂಶೋಧಕರಿಗೆ ಸಂಶೋಧನೆಗೆ ವಿಫುಲ ಅವಕಾಶ ಹಾಗೂ ಉತ್ತೇಜನಕಾರಿ ಯೋಜನೆ, ಸಹಕಾರ ನೀಡಿದ ಪರಿಣಾಮ ತಂತ್ರಜ್ಞಾನ, ಸಂಶೋಧನೆ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣಲು ಸಾಧ್ಯವಾಯಿತು ಎಂದರು.

ಯಾವುದೇ ಮಹತ್ತರವಾದ ಸಂಶೋಧನೆಗಳು ನಡೆದಾಗ ಜನಸಾಮಾನ್ಯರಿಗೆ ಆ ಬಗ್ಗೆ ಮಾಹಿತಿ ಸಿಗುವುದಿಲ್ಲ. ಹಾಗಾಗಿ ಸಂಶೋಧಕರು ಜನಸಾಮಾನ್ಯರ ಬಳಿಗೆ ತೆರಳಿ ವಿವಿಧ ಸಂಶೋಧನೆಗಳ ಬಗ್ಗೆ ಆಗುವ ಪ್ರಯೋಜನವನ್ನು ಮನವರಿಕೆ ಮಾಡಬೇಕು ಎಂದು ಟಾಸ್ಕ್‌ಪೋರ್ಸ್ ಅಧ್ಯಕ್ಷ ಡಾ.ಐ.ಕರುಣಾಸಾಗರ್ ಹೇಳಿದರು.

ನಿಟ್ಟೆ ವಿ.ವಿ. ಕುಲಪತಿ ಪ್ರೊ. ಡಾ.ಎಸ್. ರಮಾನಂದ ಶೆಟ್ಟಿ ಮಾತನಾಡಿ, ಬಡತನ ಸಮಸ್ಯೆ ಭಾರತ ಸ್ವತಂತ್ರಗೊಂಡಾಗಲೂ ಇತ್ತು. ಅದು ಜನಸಾಮಾನ್ಯರಿಗೆ ಬಲವಾಗಿ ಕಾಡಿತ್ತು. ಅದನ್ನು ಹೋಗಲಾಡಿಸಬೇಕಾದರೆ ಶಿಕ್ಷಣ ಮತ್ತು ತಂತ್ರಜ್ಞಾನದಿಂದ ಮಾತ್ರ ಸಾಧ್ಯ ಎಂದು ಮನಗಂಡ ಅಂದಿನ ರಾಜಕಾರಣಿಗಳು ಅವೆರಡೂ ಕ್ಷೇತ್ರದ ಬಗ್ಗೆ ಪರಿಚಯಿಸಿದರು. ಇಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಶೋಧನೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುತ್ತಿದೆ ಎಂದು ಹೇಳಿದರು.

ಚೆನ್ನೈನ ಸಿಎಲ್‌ಆರ್‌ಐನ ಡಾ.ಎ. ಜ್ಞಾನಮಣಿ, ತೂತುಕುಡಿ ಎಫ್‌ಸಿಆರ್‌ಐನ ಡಾ.ಆರ್. ಜೇಯಶಕೀಲ ಹಾಗೂ ಜೇಯಶೇಖರನ್, ಹೊಸದಿಲ್ಲಿ ಜೆಎನ್‌ಯುನ ಡಾ.ಅಪರ್ಣಾ ದೀಕ್ಷಿತ್, ವೆಲ್ಲೋರ್ ಸಿಎಎಚ್‌ಸಿಯ ಡಾ. ಶಾಹುಲ್ ಹಮೀದ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ನಿಟ್ಟೆ ವಿ.ವಿ. ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ಇಂದ್ರಾಣಿ ಕರುಣಾಸಾಗರ್ ಸ್ವಾಗತಿಸಿದರು. ಜ್ಯೂಲಿಯಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News