ಕಾರ್ಕಳ: ಆರ್ಥಿಕ ಮುಗ್ಗಟ್ಟಿನಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ
ಕಾರ್ಕಳ, ಜೂ.15: ಆರ್ಥಿಕ ಮುಗ್ಗಟ್ಟಿನಿಂದ ಕುಟುಂಬವೊಂದು ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದು, ಪತ್ನಿ ಸಾವನ್ನಪ್ಪಿದ್ದರೆ, ಪತಿ ಗಂಭೀರಗೊಂಡಿದ್ದು, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ಶುಕ್ರವಾರ ಕಾರ್ಕಳ ಮಹಾಲಕ್ಷೀ ಓಣಿ ಸಮೀಪದಲ್ಲಿ ನಡೆದಿದೆ.
ವಿಷ ಸೇವನೆಯ ಪರಿಣಾಮ ಗೌತಮಿ ನಾಯಕ್ (34) ಸಾವನ್ನಪ್ಪಿದ್ದರೆ, ಆಕೆಯ ಪತಿ ಗೋವಿಂದ ನಾಯಕ್ (40) ಗಂಭೀರ ಅಸ್ವಸ್ಥಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಂಪತಿಯ ಮಕ್ಕಳಾದ ಸುದರ್ಶನ್(11) ಮತ್ತು ಕಾರ್ತಿಕ್(7) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೌತಮಿ ಅವರ ಅನಾರೋಗ್ಯ ಹಾಗೂ ಅರ್ಥಿಕ ಅಡಚಣೆಯೆ ಈ ಸಾಮೂಹಿಕ ಆತ್ಮಹತ್ಯೆ ಯತ್ನಕ್ಕೆ ಕಾರಣ ಎನ್ನಲಾಗಿದೆ.
ಗೋವಿಂದ ನಾಯಕ್ ಪೇಟೆ ಭಾಗದಲ್ಲಿರುವ ದಿನಸಿ ಅಂಗಡಿಯೊಂದರಲ್ಲಿ ಸಹಾಯಕರಾಗಿ ದುಡಿಯುತ್ತಿದ್ದರು. ಅದರಿಂದ ದೊರೆಯುವ ಆದಾಯ ಕುಟುಂಬ ನಿರ್ವಹಣೆಗೆ ಸಾದ್ಯವಾಗದೇ, ಪರಿಣಾಮ ಬದುಕೇ ಕಷ್ಟ ಎಂದು ತೀರ್ಮಾನಿಸಿ ಕುಟುಂಬ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈ ದಂಪತಿ ಜೂ.16ರದು ತಮ್ಮ ಆರ್ಥಿಕ ಸಮಸ್ಯೆಯ ಬಗ್ಗೆ ಗೋವಿಂದ ನಾಯಕ್ ತಮ್ಮ ಸಮುದಾಯದ ಅನೇಕರ ಬಳಿ ಹೇಳಿಕೊಂಡಿದ್ದರು. ಯಾರೂ ಸಹಾಯ ಮಾಡಲು ಮುಂದಾಗಿರಲಿಲ್ಲ. ಇದೇ ವಿಚಾರದಲ್ಲಿ ಮನನೊಂದು ರಾತ್ರಿಯ ವೇಳೆ ಆ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದೆ ಎನ್ನಲಾಗಿದೆ.
ಸ್ಥಳೀಯರು ತಕ್ಷಣ ನಾಲ್ವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಗೌತಮಿ ದಾರಿ ಮಧ್ಯೆಯೇ ಅಸುನೀಗಿದ್ದಾರೆ. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.