ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ : ನ್ಯಾಯಾಲಯದ ತೀರ್ಪಿನಿಂದ ದಿಗ್ಭ್ರಾಂತಗೊಂಡ ಝಕಿಯಾ

Update: 2016-06-17 15:50 GMT

ಅಹ್ಮದಾಬಾದ್,ಜೂ.17: ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದ ದೋಷಿಗಳಿಗೆ ಇಲ್ಲಿಯ ವಿಶೇಷ ಸಿಟ್ ನ್ಯಾಯಾಲಯವು ಶುಕ್ರವಾರ ಪ್ರಕಟಿಸಿದ ಶಿಕ್ಷೆಯ ಪ್ರಮಾಣ ಅಂದಿನ ನರಮೇಧದಲ್ಲಿ ಹತ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಕಿಯಾ ಜಾಫ್ರಿಯವರನ್ನು ದಿಗ್ಭ್ರಾಂತರನ್ನಾಗಿಸಿದೆ.

ಒಂದೆಡೆ ನ್ಯಾಯಾಲಯವು ಗುಲ್ಬರ್ಗ್ ಹತ್ಯಾಕಾಂಡ ನಡೆದಿದ್ದ 2002,ಫೆ.28 ನಾಗರಿಕ ಸಮಾಜದ ಇತಿಹಾಸದಲ್ಲಿಯೇ ಅತ್ಯಂತ ಕರಾಳ ದಿನವಾಗಿದೆ ಎಂದು ಬಣ್ಣಿಸಿದ್ದರೆ,ಇನ್ನೊಂದಡೆ ಇದೇ ನ್ಯಾಯಾಲಯವು 69 ಜನರ ಸಾವುಗಳಿಗೆ ಕಾರಣರಾಗಿದ್ದ 24 ಅಪರಾಧಿಗಳ ಪೈಕಿ ಅರ್ಧಕ್ಕೂ ಹೆಚ್ಚು ಜನರಿಗೆ ಕ್ಷುಲ್ಲಕ ಶಿಕ್ಷೆಯನ್ನು ವಿಧಿಸಿದೆ.

ಅಷ್ಟೊಂದು ಜನರು ಅನ್ಯಾಯವಾಗಿ ಸತ್ತ ಬಳಿಕವೂ ನ್ಯಾಯಾಲಯದ ನಿರ್ಧಾರ ಇಷ್ಟೇನಾ..? ಎಲ್ಲ ಅಪರಾಧಿಗಳಿಗೂ ಜೀವಾವಧಿ ಶಿಕ್ಷೆಯಾಗಬೇಕಾಗಿತ್ತು. ಕಡಿಮೆ ಶಿಕ್ಷೆ ವಿಧಿಸಲು ನ್ಯಾಯಾಲಯವು ಕೆಲವರನ್ನು ಆಯ್ಕೆ ಮಾಡಿಕೊಂಡಿದ್ದು ಹೇಗೆ ಎಂದು ತೀರ್ಪಿನಿಂದ ಅಸಮಾಧಾನಗೊಂಡಿರುವ ಝಕಿಯಾ ಸುದ್ದಿಗಾರರನ್ನು ಪ್ರಶ್ನಿಸಿದರು.

ಅವರು ಎಹ್ಸಾನ್ ಜಾಫ್ರಿಯವರನ್ನು ಅತ್ಯಂತ ಬರ್ಬರವಾಗಿ ಕೊಂದು ಹಾಕಿದ್ದರು. ಅವರಿಗೆ ಇಷ್ಟೊಂದು ಕಡಿಮೆ ಶಿಕ್ಷೆಯೇ? ಇದು ತನಗೆ ತೃಪ್ತಿಯನ್ನು ತಂದಿಲ್ಲ. ಇದು ನ್ಯಾಯವಲ್ಲ. ತಾನು ಮತ್ತೊಮ್ಮೆ ತನ್ನ ವಕೀಲರೊಂದಿಗೆ ಸಮಾಲೋಚಿಸಬೇಕಾಗಿದೆ. ತನ್ನ ಹೋರಾಟವನ್ನು ಮುಂದುವರಿಸಬೇಕಾಗಿದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News