ಬೆಳ್ತಂಗಡಿ: ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ
ಬೆಳ್ತಂಗಡಿ, ಜೂ.17: ಶ್ರೀ ಗುರುದೇವ ಕಾಲೇಜಿನ ಸುಸಜ್ಜಿತ ಕಟ್ಟಡ ಪೂರ್ಣಗೊಂಡು ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿದೆ ಎಂದು ಶ್ರೀ ಗುರುದೇವ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.
ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪಾಲಕರ ಸಭೆ ಹಾಗೂ 2015-16ನೆ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾರಂಭದ 10 ವರ್ಷಗಳಿಂದ ಫಲಿತಾಂಶ ಏರಿಕೆಯಾಗುತ್ತಾ ಬರುತ್ತಿದ್ದು ಈ ಬಾರಿಯೂ ಅದು ಮುಂದುವರಿದಿದೆ. ಅದಕ್ಕೆ ಉಪನ್ಯಾಸಕರ ಶ್ರಮವೇ ಕಾರಣ. ಬಡ ವಿದ್ಯಾರ್ಥಿಗಳ ವಿದ್ಯೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವ ಪ್ರಾಮಾಣಿಕ ಸೇವೆ ಮಾಡಿದ್ದೇನೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಾಹಿತಿ ಅರವಿಂದ ಚೊಕ್ಕಾಡಿ, ಕಡಿಮೆ ಅಂಕಗಳನ್ನು ಪಡೆದು ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ದಾಖಲಿಸಿರುವುದು ಕಾಲೇಜಿಗೆ ಹಾಗೂ ಸಮಾಜಕ್ಕೆ ಕೊಡುಗೆಯಾಗಿದೆ ಎಂದರು.
ಟ್ರಸ್ಟಿ ಪೀತಾಂಬರ ಹೆರಾಜೆ ವೇದಿಕೆಯಲ್ಲಿದ್ದರು. ವಾಣಿಜ್ಯ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ರನಿತ ಪೂಜಾರಿ ಹಾಗೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಎ. ಕೃಷ್ಣಪ್ಪ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕ ಗಣೇಶ್ ಬಿ. ಶಿರ್ಲಾಲು ಮತ್ತು ವಿನಯ ಭಿಡೆ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಹೇಮಾವತಿ ವಂದಿಸಿದರು.