×
Ad

ವೇಣೂರು: ಬಜರಂಗದಳದ ಕಾರ್ಯಕರ್ತರಿಂದ ಯುವಕರ ಮೇಲೆ ಮಾರಣಾಂತಿಕ ಹಲ್ಲೆ

Update: 2016-06-17 22:04 IST

ಬೆಳ್ತಂಗಡಿ, ಜೂ.17: ವೇಣೂರು ಸಮೀಪ ನಡ್ತಿಕಲ್ಲು ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ತಂಡವೊಂದು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಹಲ್ಲೆಗೆ ಒಳಗಾದವರು ಮಂಗಳೂರು ಹಾಗೂ ಬೆಳ್ತಂಗಡಿಯ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಗುರುವಾರ ದನ ಹಾಗೂ ಕರುವನ್ನು ಖರೀದಿಸಿ ಕೊಂಡೊಯ್ಯುತ್ತಿದ್ದವರ ಮೇಲೆ ತಂಡವೊಂದು ತಡೆದು ಹಲ್ಲೆ ನಡೆಸಿದೆ ಎನ್ನಲಾಗಿದೆ. ಇಂದು ಹಲ್ಲೆಗೆ ಒಳಗಾದವರ ಸಂಬಂಧಿಕ ಝೈನುದ್ದೀನ್ ಎಂಬವರು ಈ ಬಗ್ಗೆ ಹಲ್ಲೆ ಮಾಡಿದವರನ್ನು ಕೇಳಿದ್ದಾರೆ. ಇದರ ಬಳಿಕ ಹಲ್ಲೆ ಮಾಡಿದವರು ಸುಮಾರು 30 ಕ್ಕೂ ಹೆಚ್ಚು ಮಂದಿ ಸೇರಿ ಝೈನುದ್ದೀನ್‌ರ ಮನೆ ಸಮೀಪ ಬಂದಿದ್ದಾರೆ. ಅಬ್ದುಲ್ ಸಮದ್ ಎಂಬವರು ಘಟನೆಯ ಬಗ್ಗೆ ಮಾತುಕತೆ ನಡೆಸಿ ಮುಗಿಸಲು ಪ್ರಯತ್ನಿಸುತ್ತಿದ್ದ ವೇಳೆ ಏಕಾಏಕಿ ಶೈಲೇಶ್, ಪ್ರಸಾದ್, ನವೀನ್ ಸಂದೀಪ್ ಹಾಗೂ ಇತರರು ಝೈನುದ್ದೀನ್ ಹಾಗೂ ಸಮದ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಅಲ್ಲಿಗೆ ಬಂದ ಮುಹಮ್ಮದ್ ಇಕ್ಬಾಲ್, ಹಾಗೂ ಇಶಾಸ್ ಎಂಬವರು ಹಲ್ಲೆ ಮಾಡುತ್ತಿದ್ದವರನ್ನು ತಡೆಯಲು ಮುಂದಾದಾಗ ಅವರ ಮೇಲೂ ಚೂರಿ ಕಲ್ಲು ಹಾಗೂ ಕೈಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಆರೋಪಿಸಿದ್ದಾರೆ.

ಈ ಬಗ್ಗೆ ವೇಣೂರು ಪೊಲೀಸರಿಗೆ ದೂರು ನೀಡಲಾಗಿದೆ. ಈ ನಡುವೆ ಇನ್ನೊಂದೆಡೆಯಿಂದ ಶೈಲೇಶ್, ಪ್ರಸಾದ್, ನವೀನ್ ಹಾಗೂ ಧರ್ಮರಾಜ್ ಎಂಬವರು ಆಸ್ಪತ್ರೆಗೆ ದಾಖಲಾಗಿದ್ದು ತಮ್ಮ ಮೇಲೆ ಹಲ್ಲೆ ನಡೆಸಿರುವುದಗಿ ದೂರು ನೀಡಿದ್ದಾರೆ. ಪೊಲೀಸರು ದೂರುಗಳನ್ನು ಸ್ವೀಕರಿಸಿದ್ದು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News