×
Ad

ಕಳತ್ತೂರು ಜಲ್ಲಿ ಕ್ರಷರ್ ಸರ್ವೇಗೆ ತೀವ್ರ ವಿರೋಧ

Update: 2016-06-17 23:46 IST

ಉಡುಪಿ, ಜೂ.17: ಹೆಬ್ರಿ ಸಂತೆಕಟ್ಟೆ ಸಮೀಪದ ಕಳತ್ತೂರು, ನಾಲ್ಕೂರು ಚಾರಾ ಗ್ರಾಮಗಳ ವ್ಯಾಪ್ತಿಯ ಹಂದಿಕಲ್ಲು ಎಂಬಲ್ಲಿ ಜಲ್ಲಿಕಲ್ಲು ಕ್ರಷರ್ ಸ್ಥಾಪನೆಗಾಗಿ ಸರ್ವೇ ಕಾರ್ಯ ನಡೆ ಸಲು ಮೂರನೆ ಬಾರಿಗೆ ಶುಕ್ರವಾರ ಆಗಮಿಸಿದ ಅಧಿಕಾರಿಗಳ ತಂಡವನ್ನು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಹಿಂದಕ್ಕೆ ಕಳುಹಿಸಿದ್ದಾರೆ. ಎ.11 ಮತ್ತು ಮೇ 28ರಂದು ಇದೇ ತಂಡ ಕ್ರಷರ್ ಸರ್ವೇಗೆ ಆಗಮಿಸಿದ್ದಾಗ ಗ್ರಾಮಸ್ಥರು ತಡೆದು ಹಿವ್ಮೆುಟ್ಟಿಸಿದ್ದರು. ಇದೀಗ ಮತ್ತೆ ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದ ಅಧಿಕಾರಿಗಳ ತಂಡ ನ್ಯಾಯಾಲಯದ ಆದೇಶದೊಂದಿಗೆ ವಕೀಲರ ಜೊತೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಸರ್ವೇ ಕಾರ್ಯಕ್ಕೆ ಆಗಮಿಸಿದ್ದರು. ಹಿಂದಿನಂತೆ ಇಂದು ಕೂಡ ಅಧಿಕಾರಿಗಳನ್ನು ಹಾಗೂ ಕ್ರಷರ್ ಮಾಲಕರನ್ನು ಕ್ರಷರ್ ವಲಯಕ್ಕೆ ತೆರಳುವ ರಸ್ತೆ ಮಧ್ಯದಲ್ಲಿಯೇ ತಡೆದ ಗ್ರಾಮಸ್ಥರು ಅವರ ವಿರುದ್ಧ ಧಿಕ್ಕಾರ ಕೂಗಿದರು. ಗ್ರಾಮಸ್ಥ ರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯ ಕರ್ತರು ಕೂಡ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.
ಕ್ರಷರ್ ಮಾಲಕರ ಪರ ವಕೀಲ ಎಚ್.ರಾಘವೇಂದ್ರ ಶೆಟ್ಟಿ ಉಡುಪಿ ನ್ಯಾಯಾಲಯದ ಆರ್ಡರ್‌ನ್ನು ಗ್ರಾಮಸ್ಥರಿಗೆ ಓದಿ ನವೀನ್ ಅಡ್ಯಂ ತಾಯರ 1.58ಎಕರೆ ಜಾಗವನ್ನು ಅಳತೆ ಮಾಡಲು ಯಾರು ವಿರೋಧ ವ್ಯಕ್ತಪಡಿಸಬಾರದೆಂದು ಕೋರ್ಟ್ ಆದೇಶಿಸಿದೆ ಎಂದು ತಿಳಿಸಿದರು. ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಇದು ಸುಳ್ಳು ಆದೇಶವಾಗಿದೆ ಎಂದು ಆರೋಪಿಸಿದರು. ಈ ವೇಳೆ ಗ್ರಾಮಸ್ಥರು ಹಾಗೂ ವಕೀಲರ ಮಧ್ಯೆ ತೀವ್ರ ವಾಗ್ವಾದ ನಡೆಯಿತು.
ತಹಶೀಲ್ದಾರ್ ಕೂಡ ಪ್ರತಿಭಟನಾ ಕಾರರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಸಫಲವಾಗಿಲ್ಲ. ಯಾವುದೇ ಕಾರಣಕ್ಕೂ ಇಲ್ಲಿ ಕ್ರಷರ್‌ಗಾಗಿ ಸರ್ವೇ ನಡೆಸಲು ಅವಕಾಶ ನೀಡಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗುರು ಪ್ರಸಾದ್ ಸರ್ವೇೆ ಕಾರ್ಯವನ್ನು ಸ್ಥಗಿತ ಗೊಳಿಸಿ ಹಿಂದಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ತಿಪ್ಪೇಸ್ವಾಮಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹೇಶ್,ಅರಣ್ಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು, ಕ್ರಷರ್‌ಪಾಲುದಾರ ನವೀನ್ ಅಡ್ಯಂತಾಯ, ಕಾರ್ಕಳ ವೃತ್ತ ನಿರೀಕ್ಷಕ ಜಿ.ಎಂ.ನಾಯಕ್, ಕರವೇ ಮುಖಂಡರಾದ ಪ್ರಸನ್ನ,ಅನ್ಸಾರ್ ಅಹ್ಮದ್, ಪರಿಸರ ಮಾಲಿನ್ಯ ವಿರೋಧಿ ಹೋರಾಟ ಸಮಿತಿಯ ಸುಧಾಕರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News