ಇನ್‌ಲ್ಯಾಂಡ್ ವಿಂಡ್ಸರ್ಸ್‌ಗೆ ‘ಪರಿಸರ ಶ್ರೇಷ್ಠತಾ’ ಪ್ರಶಸ್ತಿ
ಮಂಗಳೂರು, ಜೂ.17: ನಗರ ಪುರಭವನದಲ್ಲಿ ಜಿಲ್ಲಾಡಳಿತ, ಮಂಗಳೂರು ಮಹಾನಗರಪಾಲಿಕೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಶ್ರಯದಲ್ಲಿ ಇಂದು ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ನಗರದ ಮೇರಿಹಿಲ್‌ನಲ್ಲಿರುವ ಪ್ರತಿಷ್ಠಿತ ವಸತಿ ಸಮುಚ್ಚಯ ‘ಇನ್‌ಲ್ಯಾಂಡ್ ಬಿಲ್ಡರ್ಸ್’ ಸಂಸ್ಥೆಯ ‘ಇನ್‌ಲ್ಯಾಂಡ್ ವಿಂಡ್ಸರ್ಸ್’ ಗೆ ‘ಪರಿಸರ ಶ್ರೇಷ್ಠತಾ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇನ್‌ಲ್ಯಾಂಡ್ ಗ್ರೂಪ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ಮತ್ತು ನಿರ್ದೇಶಕ ವಹಾಜ್ ಯೂಸುಫ್ ಅವರಿಗೆ ರಾಜ್ಯ ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಪ್ರಶಸ್ತಿ ಪ್ರದಾನಿಸಿ, ಗೌರವಿಸಿದರು.
ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯಾದ ‘ಸುರಕ್ಷಾ ಪುರಸ್ಕಾರ್-2011’ನೊಂದಿಗೆ ಇನ್‌ಲ್ಯಾಂಡ್ ವಿಂಡ್ಸರ್ಸ್ ಪಡೆದ 6ನೆ ಪ್ರಶಸ್ತಿ ಇದಾಗಿದೆ. ಎನ್‌ಐಟಿಕೆಯ ಪ್ರೊ.ಜಿ.ಶ್ರೀನಿಕೇತನ್, ಕೆಸಿಸಿಐ ಅಧ್ಯಕ್ಷ ರಾಮ್‌ಮೋಹನ್ ಪೈ ಮಾರೂರು, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಪರಿಸರ ಇಲಾಖೆಯ ಪದ್ಮನಾಭ ಗೌಡ, ಕಾರ್ಖಾನೆಗಳು ಮತ್ತು ಬಾಯ್ಲರ್‌ಗಳ ಹಿರಿಯ ಉಪ ನಿರ್ದೇಶಕ ನಂಜಪ್ಪ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರತಿನಿಧಿ ಮೂರ್ತಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ರಾಜಶೇಖರ್ ಪುರಾಣಿಕ್ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿಯು ‘ಇನ್‌ಲ್ಯಾಂಡ್ ವಿಂಡ್ಸರ್ಸ್’ ಕಟ್ಟಡವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ್, ಶಾಸಕ ಮೊಯ್ದಿನ್ ಬಾವ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಜಿಪಂ ಸಿಇಒ ಶ್ರೀವಿದ್ಯಾ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮನಪಾ ಆಯುಕ್ತ ಡಾ. ಎಚ್.ಎನ್.ಗೋಪಾಲಕೃಷ್ಣ, ಎಲ್.ನಾರಾಯಣಸ್ವಾಮಿ ಉಪಸ್ಥಿತರಿದ್ದರು.
‘ಇನ್‌ಲ್ಯಾಂಡ್ ವಿಂಡ್ಸರ್ಸ್’ನಲ್ಲಿ ಹಲವಾರು ಅತ್ಯಾಧುನಿಕ ಪರಿಸರ ಸ್ನೇಹಿ ತಂತ್ರಜ್ಞಾನಗಳು ಹಾಗೂ ಉಪಕರಣಗಳನ್ನು ಅಳವಡಿಸಲಾಗಿದೆ. ತ್ಯಾಜ್ಯ ಸಂಸ್ಕರಣಾ ಘಟಕ, ಮಳೆ ನೀರಿನ ಪುನರ್ಬಳಕೆ, ತ್ಯಾಜ್ಯ ನೀರಿನ ಪುನರ್ಬಳಕೆ, ಗಾರ್ಬೇಜ್ ಚೂಟ್‌ಗಳ ಮೂಲಕ ಘನತ್ಯಾಜ್ಯಗಳ ಸೂಕ್ತ ವಿಲೇವಾರಿ, ಎಲ್‌ಇಡಿ ಲೈಟ್‌ಗಳ ಬಳಕೆ ಹಾಗೂ ಕಟ್ಟಡದ ಸುತ್ತಮುತ್ತಲು ಸಾಕಷ್ಟು ಹಸಿರು- ಇವುಗಳ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಇನ್‌ಲ್ಯಾಂಡ್ ವಿಂಡ್ಸರ್ಸ್ ಕೊಡುಗೆಯನ್ನು ನೀಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಿರಾಜ್ ಅಹ್ಮದ್ ಅವರು ತಿಳಿಸಿದ್ದಾರೆ.