ಹಿರಿಯ ಶಾಸಕ ಕೆ.ವಸಂತ ಬಂಗೇರ ಹಾಗೂ ಮೋಟಮ್ಮ ಅವರಿಗೆ ಸಚಿವ ಸ್ಥಾನ ನೀಡಬೇಕು : ಶಿವಪ್ಪ ರೆಂಕೆದಗುತ್ತು
ಮಂಗಳೂರು, ಜೂ.18:ಹಿರಿಯ ಶಾಸಕ ಕೆ.ವಸಂತ ಬಂಗೇರ ಹಾಗೂ ಮೋಟಮ್ಮ ಅವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಅಂಬೇಡ್ಕರ ಪ್ರತಿಷ್ಠಾನ ರಾಜಾಧ್ಯಕ್ಷ ಶಿವಪ್ಪ ರೆಂಕೆದಗುತ್ತು ಒತ್ತಾಯಿಸಿದ್ದಾರೆ. ಶೋಷಿತ ಜನಾಂಗದ ಜನರು ಹಾಗೂ ದೀನ ದಲಿತರ ಅಲ್ಪಸಂಖ್ಯಾತರ ಕಷ್ಟಗಳಿಗೆ ಸ್ಪಂದಿಸುವ ಏಕೈಕ ಶಾಸಕರಾದ ವಸಂತ ಬಂಗೇರ 5 ಬಾರಿ ಜಯ ಸಾಧಿಸಿದ್ದಾರೆ. ಅವರಿಗೆ ಬಂದರು ಮತ್ತು ಮೀನುಗಾರಿಕಾ ಇಲಾಖೆಯಲ್ಲಿ ಸಚಿವ ಸ್ಥಾನವನ್ನು ಸಿಎಂ ಸಿದ್ದರಾಮಯ್ಯ ಅವರು ನೀಡಬೇಕು. ಮೋಟಮ್ಮ ಅವರಿಗೆ ಯಾವ ಸ್ಥಾನ ನೀಡಿದರೂ ಅವರು ನಿಭಾಯಿಸಲು ಸಮರ್ಥರಾಗಿದ್ದಾರೆ. ಕೂಡಲೇ ಅವರಿಗೆ ಸಚಿವ ಸ್ಥಾನ ನೀಡದೇ ಹೋದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದರು. ಶ್ರೀನಿವಾಸ ಪ್ರಸಾದ್ ಅವರನ್ನು ಸಿದ್ದರಾಮಯ್ಯ ಅವರು ಸಚಿವ ಸ್ಥಾನದಿಂದ ಕೈಬಿಟ್ಟಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಲು ಬೇಕಾದ ಹೋರಾಟವನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಅಂಬೇಡ್ಕರ್ ಪ್ರತಿಷ್ಠಾನ ಜಿಲ್ಲಾಧ್ಯಕ್ಷ ಕೆ. ಸಾಲು ಉಪಸ್ಥಿತರಿದ್ದರು.