ಸುಳ್ಯದಲ್ಲಿ ಜಿಲ್ಲಾಧಿಕಾರಿಯಿಂದ ಅಹವಾಲು ಸ್ವೀಕಾರ
ಸುಳ್ಯ: ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸುಳ್ಯಕ್ಕೆ ಆಗಮಿಸಿ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಜಾಲ್ಸೂರು ಕೋನಡ್ಕ ಪದವಿನ ಸುಮಾರು 50ಕ್ಕೂ ಹೆಚ್ಚುಮಂದಿ ತಮ್ಮ ಅಹವಾಲನ್ನು ಡಿ.ಸಿ.ಯವರ ಮುಂದಿಟ್ಟರು. ತಾ.ಪಂ. ಸದಸ್ಯ ತೀರ್ಥರಾಮ ಜಾಲ್ಸೂರು, ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ನಾಯಕ್, ಮಾಜಿ ಅಧ್ಯಕ್ಷ ಭಾಸ್ಕರ, ಕನಕಮಜಲು ಗ್ರಾ.ಪಂ. ಸದಸ್ಯ ಪವಾಜ್‌ರವರ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದರು. ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಿದ ಫಲಾನುಭವಿಗಳು, ‘ಜಾಲ್ಸೂರು ಗ್ರಾಮದ ಕೋನಡ್ಕಪದವು ದೇವಸ್ಥಾನದ ಬಳಿ ಸುಮಾರು 33 ಕುಟುಂಬದವರು ಗೋಮಾಳಕ್ಕೆ ಮೀಸಲಾಗಿಟ್ಟ ಸ್ಥಳದಲ್ಲಿ ಹಲವು ವರ್ಷಗಳ ಹಿಂದೆ ಮನೆಗಳನ್ನು ಕಟ್ಟಿ ವಾಸವಾಗಿದ್ದು, ತಮಗೆ ಹಕ್ಕು ಪತ್ರ ಇದುವರೆಗೆ ಸಿಕ್ಕಿಲ್ಲ. 94 ಸಿಯಲ್ಲಿ ಅರ್ಜಿ ಸಲ್ಲಿಸಿದ್ದು, ಹಕ್ಕುಪತ್ರ ನೀಡಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ದರಿಂದ ಈ ಕುರಿತು ಪರಿಶೀಲಿಸಿ ನಮಗೆ ಹಕ್ಕುಪತ್ರ ಕೊಡಿಸಬೇಕು’ ಎಂದು ಮನವಿ ಮಾಡಿದರು. ಇದು ಸರಕಾರದ ಮಟ್ಟದಲ್ಲಿ ಆಗಬೇಕಾಗಿರುವ ಪ್ರಕ್ರಿಯೆ ಯಾಗಿರುವುದರಿಂದ ನಾವು ಇಲ್ಲಿಂದ ನಿಮ್ಮ ಮನವಿ ಕಳುಹಿಸುವುದಾಗಿ ಹೇಳಿದರು. ಇಂತಹ ಪ್ರಕರಣಗಳು ತಾಲೂಕಿನಲ್ಲಿ ಎಲ್ಲೆಲ್ಲಿ ಇವೆಯೋ ಅದೆಲ್ಲವನ್ನು ಒಟ್ಟು ಸೇರಿಸಿ, ಕಳುಹಿಸಿಕೊಡುವಂತೆ ಉಪ ತಹಶೀಲ್ದಾರ್‌ರಿಗೆ ಜಿಲ್ಲಾಧಿಕಾರಿ ಆದೇಶಿಸಿದರು. ಆರ್.ಟಿ.ಇ. ಯಲ್ಲಿ ಆಯ್ಕೆಯಾಗಿ ಮೆಸೇಜ್ ಬಂದರೂ ಶಾಲೆಯಲ್ಲಿ ದಾಖಲಾತಿ ಮಾಡಿಕೊಳ್ಳದಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಹೇಳಿಕೊಂಡ ಘಟನೆಯೂ ನಡೆಯಿತು. ಶಾರಿಕ್ ಮೊಗರ್ಪಣೆ, ಮಜೀದ್, ಹಂಸ ಮೊದಲಾದವರ ನೇತೃತ್ವದಲ್ಲಿ ದೂರು ನೀಡಲಾಯಿತು. ಈ ದೂರಿನ ಹಿನ್ನಲೆಯಲ್ಲಿ ಡಿ.ಸಿ.ಯವರು ಬಿ.ಇ.ಒ. ಕೆಂಪಲಿಂಗಪ್ಪರನ್ನು ತಾಲೂಕು ಕಚೇರಿಗೆ ಕರೆಸಿಕೊಂಡು ವಿವರಣೆ ಪಡೆದು ಕೊಂಡರು. "ಮೊದಲ ಹಂತದಲ್ಲಿ ಆಯ್ಕೆಯಾದ ಮಕ್ಕಳ ದಾಖಲಾತಿಯಂತೆ ನೇಮಕ ಪ್ರಕ್ರಿಯೆ ನಡೆದಿದೆ. ಈಗ 2ನೇ ಹಂತದಲ್ಲಿ ದಾಖಲಾತಿ ಮಾಡಲಾಗುತ್ತಿದೆ. ಮೆಸೇಜ್‌ಗಳು ಪೋಷಕರಿಗೆ ಬರುವುದರಿಂದ ಅವರು ನಮ್ಮ ಬಳಿಗೆ ಬಂದ ಬಳಿಕವೇ ಯಾವ ಮಗು ಆಯ್ಕೆಯಾಗಿದೆ ಎಂದು ನಮಗೆ ತಿಳಿಯುತ್ತದೆ. ನಮಗೆ ನೀಡಿರುವ ಗೈಡ್‌ಲೈನ್ ಪ್ರಕಾರವೇ ನಾವು ದಾಖಲಾತಿ ಮಾಡುತ್ತಿದ್ದೇವೆ" ಎಂದು ಬಿ.ಇ.ಒ. ಕೆಂಪಲಿಂಗಪ್ಪ ಡಿ.ಸಿ.ಯವರಿಗೆ ಹೇಳಿದರು. ಆರ್.ಟಿ.ಇ. ಗೊಂದಲದ ಕುರಿತು ಪತ್ರಕರ್ತರು ಜಿಲ್ಲಾಧಿಕಾರಿಗಳನ್ನು ಕೇಳಿದಾಗ, ‘ಈ ಬಾರಿ ಕೆಲವೊಂದು ಗೊಂದಲಗಳು ಆಗಿದೆ. ಈ ಎಲ್ಲ ಗೊಂದಲಗಳ ಕುರಿತು ನಾವು ಬರೆಯುತ್ತೇವೆ. ಮುಂದೆ ಈ ರೀತಿ ಆಗದಂತೆ ಮಾಡಬೇಕಾಗಿದೆ’ ಎಂದು ಹೇಳಿದರು.
ಆಲೆಟ್ಟಿ ಗ್ರಾಮದ ಮಿತ್ತಡ್ಕ-ಕುದ್ಕುಳಿ ಎಂಬಲ್ಲಿ ಜಾಗದ ಮಾಲಿಕರ ಅನುಮತಿ ಪಡೆಯದೇ ಮೆಸ್ಕಾಂನವರು ವಿದ್ಯುತ್ ಲೈನ್ ಎಳೆದಿರುವ ಕುರಿತು ರೇಖಾ, ಲೀಲಾವತಿ ಎಂಬವರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಮೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡ ಜಿಲ್ಲಾಧಿಕಾರಿಯವರು "ಅವರನ್ನು ಪ್ರಶ್ನಿಸಿ, ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು.
94 ಸಿಯಲ್ಲಿ ಕುಕ್ಕಂದೂರಿನ ಸಿ.ಆರ್.ಸಿ. ಕಾಲೊನಿಯವರು ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ಅರಣ್ಯ ಎಂದು ಹೇಳುತ್ತಿದ್ದಾರೆ ಎಂದು ಸತ್ಯಶಾಂತಿ ತ್ಯಾಗಮೂರ್ತಿಯವರ ನೇತೃತ್ವದಲ್ಲಿ ಹಲವರು ಅಹವಾಲು ವ್ಯಕ್ತ ಪಡಿಸಿದರು. ಕಂದಾಯ, ಅರಣ್ಯ, ಸರ್ವೆಯವರಿದ್ದು ಜಂಟಿ ಸರ್ವೆ ನಡೆಸುವಂತೆ ಡಿ.ಸಿ.ಯವರು ತಹಶೀಲ್ದಾರಿಗೆ ಸೂಚನೆ ನೀಡಿದರು.
ವಿಶ್ವನಾಥ್ ಅಲೆಕ್ಕಾಡಿಯವರು 94 ಸಿ ಅರ್ಜಿ ಪೆಂಡಿಂಗ್ ಇರುವ ಕುರಿತು, ಸರಕಾರದಿಂದ ಮಂಜೂರಾಗಿರುವ ಮನೆಕಟ್ಟಲು ಫಲಾನುಭವಿಗಳಿಗೆ ಮರಳಿನ ತೊಂದರೆ ಇರುವು ಕುರಿತು ಗಮನ ಸೆಳೆದರು.