ಕಟ್ಟ ಗೋವಿಂದನಗರ ಶಾಲಾ ಎಸ್.ಡಿ.ಎಂ.ಸಿ. ಸದಸ್ಯರ ಸಾಮೂಹಿಕವಾಗಿ ರಾಜೀನಾಮೆ
ಸುಳ್ಯ,ಜೂ18: ಶಾಲೆಗಳಲ್ಲಿ ಮಕ್ಕಳ ಕೊರತೆ, ಶಿಕ್ಷಕರ ನೇಮಕಾತಿ ಆಗದಿರುವುದು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಮಸ್ಯೆಗಳಿಗೆ ಕಾರಣವಾಗಿದ್ದು, ಕಟ್ಟ ಗೋವಿಂದನಗರ ಶಾಲೆಯಿಂದ ಶಿಕ್ಷಕಿಯನ್ನು ಗಡಿಕಲ್ಲು ಶಾಲೆಗೆ ನಿಯೋಜಿಸಿದ ಇಲಾಖೆಯ ಕಾರ್ಯವೈಖರಿಯನ್ನು ಪ್ರತಿಭಟಿಸಿ ಎಸ್.ಡಿ.ಎಂ.ಸಿ. ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿದ ಘಟನೆ ನಡೆದಿದೆ.
ಕೊಲ್ಲಮೊಗ್ರ ಮತ್ತು ಕಲ್ಮಕಾರು ಗ್ರಾಮಗಳ ಗಡಿಯಲ್ಲಿರುವ ಗಡಿಕಲ್ಲು ಕಿ.ಪ್ರಾ ಶಾಲೆಯಲ್ಲಿ 11 ಮಕ್ಕಳಿದ್ದು, ಆದರೆ ಒಬ್ಬರೇ ಒಬ್ಬರು ಶಿಕ್ಷಕರಿರಲ್ಲ. ಕಳೆದ ವರ್ಷ ಅಲ್ಲಿದ್ದ ಒಬ್ಬ ಶಿಕ್ಷಕ ಜೋಯಪ್ಪರಿಗೆ ಮುಂಭಡ್ತಿಯಾಗಿ ವರ್ಗಾವಣೆಯಾದಾಗ ಕೊಲ್ಲಮೊಗ್ರ ಶಾಲೆಯಿಂದ ಸವಿತ ಎಂಬ ಶಿಕ್ಷಕಿ ಡೆಪ್ಯುಟೇಶನ್ ನೆಲೆಯಲ್ಲಿ ಬಂದಿದ್ದರು. ಅವರು ಈಗ ಹೆರಿಗೆ ರಜೆಯಲ್ಲಿದ್ದಾರೆ. ಈ ಶಾಲಾ ಆರಂಭಕ್ಕೆ ಒಂದು ವಾರ ಕಲ್ಮಕಾರಿನಿಂದ ಪಾರ್ವತಿ ಎಂಬವರು ಬಂದಿದ್ದರು. ಈಗ ಯಾರು ಶಿಕ್ಷಕರಿಲ್ಲದಿರುವುದರಿಂದ ಸಿ.ಆರ್.ಪಿ. ತಾರಾಮತಿಯವರು ಮತ್ತು ಅಡುಗೆ ಸಹಾಯಕಿ ಸರಸ್ವತಿಯವರು ಮಕ್ಕಳನ್ನು ನೋಡಿಕೊಳ್ಳುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಗಡಿಕಲ್ಲು ಶಾಲೆಗೆ ಕಟ್ಟ ಗೋವಿಂದನಗರ ಶಾಲೆಯ ಶಿಕ್ಷಕಿ ದಿವ್ಯರವರನ್ನು ಡೆಪ್ಯೂಟ್ ಮಾಡಿ ಬಿ.ಇ.ಒ ಆದೇಶಿಸಿದ್ದರು. ಎಸ್.ಡಿ.ಎಂ.ಸಿ ಯವರು ಶಿಕ್ಷಕಿಯನ್ನು ಕಳುಹಿಸಿಕೊಡಲು ಒಪ್ಪದ ಕಾರಣ ಗಡಿಕಲ್ಲಿಗೆ ಶಿಕ್ಷಕಿ ಹೋಗಿರಲಿಲ್ಲ. ಗಡಿಕಲ್ಲು ಶಾಲೆಗೆ ಹೊಸದಾಗಿ ನೇಮಕಗೊಂಡಿರುವ ಶಿಕ್ಷಕಿಯೊಬ್ಬರು ಒಂದು ತಿಂಗಳಲ್ಲಿ ಬರಲಿದ್ದು, ಅದುವರೆಗೆ ದಿವ್ಯರನ್ನು ಕಳುಹಿಸಿ ಕೊಡಲು ಎಸ್.ಡಿ.ಎಂ.ಸಿ ಯವರ ಮನವೊಲಿಸುವ ಪ್ರಯತ್ನ ನಡೆದಿತ್ತಾದರೂ ಕಟ್ಟಗೋವಿಂದ ನಗರ ಶಾಲೆಯಲ್ಲಿ 25 ಕ್ಕಿಂತಲೂ ಹೆಚ್ಚು ಮಕ್ಕಳಿರುವ ಕಾರಣ ಅಲ್ಲಿಂದ ಶಿಕ್ಷಕಿಯನ್ನು ಕಳುಹಿಸಲು ಎಸ್.ಡಿ.ಎಂ.ಸಿ ಯವರು ಒಪ್ಪಲಿಲ್ಲ. ಈ ಹಿನ್ನಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಟ್ಟ ಶಾಲೆಗೆ ತೆರಳಿ ಶಿಕ್ಷಕಿಯನ್ನು ಇಲಾಖಾ ವಾಹನದಲ್ಲಿ ಕರೆದೊಯ್ದು ಗಡಿಕಲ್ಲು ಶಾಲೆಗೆ ಬಿಟ್ಟರೆಂದು ತಿಳಿದುಬಂದಿದೆ. ಇಲಾಖೆಯ ಈ ವರ್ತನೆ ಎಸ್.ಡಿ.ಎಂ.ಸಿ ಯವರ ಅಸಮಾಧಾನಕ್ಕೆ ಕಾರಣವಾಯಿತು. ಪೋಷಕರೊಂದಿಗೆ ತುರ್ತು ಸಭೆ ನಡೆಸಿದ ಅವರು ತಮ್ಮ ಸಾಮೂಹಿಕ ರಾಜೀನಾಮೆ ಸಲ್ಲಿಸಿದರು. ಎಸ್.ಡಿ.ಎಂ.ಸಿ. ಗಮನಕ್ಕೆ ತಾರದೆಯೇ ಶಿಕ್ಷಕಿಯನ್ನು ಗಡಿಕಲ್ಲು ಶಾಲೆಗೆ ಕರ್ತವ್ಯಕ್ಕೆ ಹಾಜರುಪಡಿಸಿದ ಕ್ರಮವನ್ನು ಖಂಡಿಸಿ ರಾಜೀನಾಮೆ ನೀಡಿರುವುದಾಗಿ ಅಧ್ಯಕ್ಷ ಮಣಿಕಂಠ ಕಟ್ಟರವರು ಸುದ್ದಿ ಚಾನೆಲ್‌ಗೆ ತಿಳಿಸಿದರು. ಇದೀಗ ಪೋಷಕರೂ ಕೂಡಾ ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲ. ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಾಗಿದೆ.