×
Ad

ಪುತ್ತೂರು: ಫಲ ನೀಡುವ ಮರಗಳನ್ನು ಬೆಳೆಸಬೇಕು - ಡಾ.ಕೆ.ಎಲ್.ಚಡ್ಡಾ

Update: 2016-06-18 19:51 IST

ಪುತ್ತೂರು,ಜೂ.18: ಯಾವುದೇ ಫಲ ನೀಡದ ಮರಗಳನ್ನು ನೆಡುವ ಬದಲು ಫಲ ನೀಡುವ ಮರಗಳನ್ನು ಬೆಳೆಸಬೇಕು. ಅನಗತ್ಯ ಜಾಗ ಪೋಲು ಮಾಡುವುದು ಸರಿಯಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಹೆಚ್ಚಿನ ಗಮನ ಹರಿಸಬೇಕಾಗದ ಅಗತ್ಯವಿದೆ ಎಂದು ದ ಹಾರ್ಟಿಕಲ್ಚರ್ ಸೊಸೈಟಿ ಆಫ್ ಇಂಡಿಯಾದ ಮಾಜಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಪದ್ಮಶ್ರೀ ಡಾ.ಕೆ.ಎಲ್.ಚಡ್ಡಾ ಹೇಳಿದರು.

ಅವರು ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಶನಿವಾರ ನಡೆದ ಗೇರು ಸಂಸ್ಥಾಪನಾ ದಿನ ಮತ್ತು ಗೇರು ಬೆಳೆಗಾರರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಲಭ್ಯ ಭೂಮಿಯ ಪ್ರಮಾಣ ಕಡಿಮೆಯಾಗುತ್ತಿದ್ದು, ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಸ್ಥಳಗಳಲ್ಲಿ ಅನಾವಶ್ಯಕ ಮರಗಳು ಹಾಗೂ ಖಾಲಿ ಜಮೀನು ಹೇರಳವಾಗಿದೆ. ಅದರಲ್ಲಿ ಫಲವಸ್ತುಗಳನ್ನು ನೀಡುವ ಮರಗಳನ್ನು ಬೆಳೆಸುವ ಅಗತ್ಯವಿದೆ ಎಂದರು.

   ಗೇರು ತಳಿಗಳ ಮೂಲಕ ಹೆಚ್ಚಿನ ಇಳುವರಿ ಪಡೆಯುವ ನಿಟ್ಟಿನಲ್ಲಿ ಬೆಳೆಗಾರರು ಮುಂದಾಗಬೇಕು. ತಾಂತ್ರಿಕ ಕ್ರಮಗಳನ್ನು ಅಳವಡಿಸಿಕೊಂಡು ಇಳುವರಿ ಮಟ್ಟವನ್ನು ಹೆಚ್ಚಿಸಬೇಕು ಎಂದ ಅವರು ಗೇರು ಬೆಳೆಗೆ ನೀರಿನ ಪ್ರಮಾಣ ಮತ್ತು ಜಾಗದ ಬಗ್ಗೆ ಅಧ್ಯಯನ ನಡೆಯಬೇಕು. ಹೆಚ್ಚು ಇಳುವರಿ ನೀಡುವ, ಹೊಸ ತಳಿ ಅಭಿವೃದ್ಧಿ ಪಡಿಸುವ ಮತ್ತು ಶೇಖರಣೆ ನಡೆಸುವ ಚಿಂತನೆ ಹರಿಸಬೇಕು ಎಂದರು.

ಗೇರು ಬೆಳೆಯಲ್ಲಿ ನೀರಿನ ಪ್ರಾಮುಖ್ಯತೆಯ ಬಗ್ಗೆ ಅರಿತುಕೊಳ್ಳಬೇಕು. ನೀರನ್ನು ಆಶ್ರಯಿಸದ ಬೆಳೆಗಳಿಗೆ ಒತ್ತು ನೀಡುವುದು ಅಗತ್ಯ. ಗೇರು ಬೆಳೆಗೂ ನೀರು ಹಾಯಿಸುತ್ತಿದ್ದು, ಗೇರು ಮರಕ್ಕೆ ನೀರಿನ ಅವಶ್ಯಕತೆ ಎಷ್ಟು ಬೇಕು ಎನ್ನುವ ಬಗ್ಗೆ ಎಲೆ ವಿಶ್ಲೇಷಣೆ ನಡೆಸುವ ಅಗತ್ಯವಿದೆ. ಅನುದಾನ, ತಾಂತ್ರಿಕತೆ, ಮೂಲಸೌಕರ್ಯ ಕಾರ್ಖಾನೆ ಬೆಳೆಯಲು ಅಗತ್ಯ. ತೋಟಗಾರಿಕಾ ಬೆಳೆಗಳನ್ನು ಅಭಿವೃದ್ಧಿಪಡಿಸಿ, ರಫ್ತಿನ ಕಡೆ ಹೆಚ್ಚಿನ ಗಮನ ನೀಡಬೇಕು ಎಂದರು.

ನಿರ್ದೇಶನಾಲಯದ ನಿವೃತ್ತ ನಿರ್ದೇಶಕ ಎಂ.ಜಿ.ಭಟ್ ಮಾತನಾಡಿ ಸಂಸ್ಕರಣೆಯ ಅರ್ಧದಷ್ಟು ಗೇರು ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. ಉಳಿದಂತೆ ಆಮದು ಮಾಡಿಕೊಳ್ಳಲಾಗುತ್ತಿದೆ. ಆಫ್ರಿಕಾದ ಗೇರು ಭಾರತದಷ್ಟು ಗುಣಮಟ್ಟ ಹೊಂದಿಲ್ಲ. ವಿಯೆಟ್ನಾಂಗೆ ಗೇರು ಬೆಳೆಯನ್ನು ಭಾರತವೇ ತಿಳಿಹೇಳಿದ್ದು. ಈಗ ಭಾರತಕ್ಕಿಂತ ವಿಯೆಟ್ನಾಂ ಮುಂದಿದೆ. ನಮ್ಮ ತಂತ್ರಜ್ಞಾನವನ್ನು ತೆಗೆದುಕೊಂಡು ಅವರು ಕಾರ್ಯಗತ ಮಾಡಿದ್ದಾರೆ. ಕೃಷಿಕರ ಸಹಕಾರವಿದ್ದರೆ ಮಾತ್ರ ಭಾರತವೂ ಮುಂದೆ ಬರಬಹುದು. ಆಮದು ನಿಲ್ಲಿಸಿ ರಫ್ತು ಕಡೆ ಹೆಚ್ಚು ಗಮನ ಹರಿಸಬೇಕು. ಮೇಕ್ ಇನ್ ಇಂಡಿಯಾವನ್ನು ಕಾರ್ಯಗತಗೊಳಿಸಬೇಕು ಎಂದರು.

ಡಿಸಿಆರ್ ನಿರ್ದೇಶಕ ಪ್ರೊ.ಪಿ.ಎಲ್.ಸರೋಜ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪನಾ ದಿನದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ‘ಸುಧಾರಿತ ಗೇರು ತಳಿಗಳು ಕರ್ನಾಟಕಕ್ಕೆ’ ಹಾಗೂ ಗೇರು ಕಾಂಡ ಮತ್ತು ಬೇರು ಕೊರಕ’ ಎಂಬ ಕಿರು ಹೊತ್ತಗೆಯನ್ನು ಇದೇ ಸಂದರ್ಭ ಅನಾವರಣಗೊಳಿಸಲಾಯಿತು. ಕೃಷಿ ಸಾಧಕರಾದ ಡಾ.ಎಲ್.ಸಿ.ಸೋನ್ಸ್, ಸೋಮಪ್ಪ ರೈ, ಶಶಿಕುಮಾರ್ ರೈ ಅವರನ್ನು ಸನ್ಮಾನಿಸಲಾಯಿತು.

ಪ್ರಧಾನ ವಿಜ್ಞಾನಿ ಟಿ.ಎನ್.ರವಿಪ್ರಸಾದ್ ಸ್ವಾಗತಿಸಿ, ಡಾ.ಬಾಲಸುಬ್ರಹ್ಮಣ್ಯ ವಂದಿಸಿದರು. ಪ್ರಕಾಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News