ಬಾಳೆಪುಣಿ ಗ್ರಾಮದ ಮನೆಯೊಂದಕ್ಕೆ ಕತ್ತಲೆ ಭಾಗ್ಯ
ಮಂಗಳೂರು, ಜೂ.18: ಮನೆಯಲ್ಲಿಯೋ, ಕಚೇರಿಯಲ್ಲಿಯೋ ಅರ್ಧ ತಾಸು ವಿದ್ಯುತ್ ಕಡಿತಗೊಂಡರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ನಮ್ಮ ಜನರಲ್ಲಿಲ್ಲ. ಅಂತಹದರಲ್ಲಿ ಬಾಳೆಪುಣಿ ಗ್ರಾಮದ ಮನೆಯೊಂದಕ್ಕೆ 32 ದಿನಗಳ ಕಾಲ ವಿದ್ಯುತ್ ಕಡಿತಗೊಂಡಿದೆ. ಸ್ವತಃ ಜಿಲ್ಲಾಧಿಕಾರಿಗಳೆ ವಿದ್ಯುತ್ ಕಡಿತ ಸಮಸ್ಯೆ ಪರಿಹರಿಸಲು ಸೂಚನೆ ನೀಡಿದರೂ ಕಿಂಚಿತ್ತು ಪ್ರಯೋಜನವಾಗಿಲ್ಲ.
ಈ ಸಮಸ್ಯೆ ಎದುರಾಗಿರುವುದು ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ನೇರೋಳ್ತಡಿಯಲ್ಲಿರುವ ಪುತ್ತಬ್ಬ ಬ್ಯಾರಿ ಅವರ ಮನೆಯಲ್ಲಿ. ಮೇ 17ಕ್ಕೆ ಇವರ ಮನೆಯಲ್ಲಿ ವಿದ್ಯುತ್ ಕಡಿತದ ಸಮಸ್ಯೆ ಇನ್ನು ಪರಿಹಾರಗೊಂಡಿಲ್ಲ.
ಮೇ 17 ರಂದು ಪುತ್ತಬ್ಬ ಬ್ಯಾರಿ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬದ ಮೇಲೆ ತೆಂಗಿನ ಮರವೊಂದು ಬಿದ್ದು ಸಂಪರ್ಕ ಕಡಿತಗೊಂಡಿತ್ತು. ಪುತ್ತಬ್ಬ ಬ್ಯಾರಿ ಮನೆ ಸೇರಿದಂತೆ ಪರಿಸರದ ನಾಲ್ಕು ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ವಿದ್ಯುತ್ ಕಂಬ ಮುರಿದು ಬಿದ್ದ ಹಿನ್ನೆಲೆಯಲ್ಲಿ ಹೊಸ ವಿದ್ಯುತ್ ಕಂಬ ಹಾಕಲು ಮೆಸ್ಕಾಂಗೆ ವಿನಂತಿಸಿದಂತೆ ಮೆಸ್ಕಾಂನವರು ವಿದ್ಯುತ್ ಕಂಬವನ್ನು ಹಾಕಲು ಬಂದರೆ ಅದಕ್ಕೆ ಪುತ್ತಬ್ಬ ಬ್ಯಾರಿಯವರ ನೆರೆಮನೆಯ ವ್ಯಕ್ತಿ ಅದ್ರಾಯ ಯಾನೆ ಅಬ್ದುಲ್ ರಹಮಾನ್ ಅವರು ಅಡ್ಡಿಪಡ್ಡಿಸಿದ್ದಾರೆ. ಈ ಹಿಂದೆಯೂ ಅದ್ರಾಯ ಯಾನೆ ಅಬ್ದುಲ್ ರಹಮಾನ್ ಅವರ ಜಾಗದಲ್ಲಿ ಕಂಬವಿದ್ದು ಇದೀಗ ಮೆಸ್ಕಾಂ ಇಲಾಖೆ ಅದೇ ಜಾಗದಲ್ಲಿ ಕಂಬ ಹಾಕಲು ಬಂದಿತ್ತು. ಪುತ್ತಬ್ಬ ಬ್ಯಾರಿಯವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಂದಿದ್ದ ಮೆಸ್ಕಾಂ ತಂಡ ಅಬ್ದುಲ್ ರಹಮಾನ್ ಅವರ ತಕರಾರಿನಿಂದ ಮೆಸ್ಕಾಂ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗದೆ ಹಿಂದಿರುಗಿತ್ತು.
ಅಲ್ಲಿಂದ ಶುರುವಾದ ಪುತ್ತಬ್ಬ ಬ್ಯಾರಿಯವರ ಕುಟುಂಬದ ಅಲೆದಾಟ ಇನ್ನು ಮುಗಿದಿಲ್ಲ. ಪುತ್ತಬ್ಬ ಬ್ಯಾರಿಯವರ ಮಗ ಅಶ್ರಫ್ ಮನೆಯ ವಿದ್ಯುತ್ ಕಡಿತಗೊಂಡಿರುವುದರಿಂದ ಕಳೆದ 32 ದಿನಗಳಿಂದ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಆದರೆ ಅವರ ಅಲೆದಾಟದಿಂದ ಕಿಂಚಿತ್ತು ಪ್ರಯೋಜನವೂ ಆಗಿಲ್ಲ.
ವಿದ್ಯುತ್ ಕಂಬವನ್ನು ಹಾಕಲು ಅಬ್ದುಲ್ ರಹಮಾನ್ ಅವರು ಅಡ್ಡಿಪಡ್ಡಿಸುತ್ತಿರುವುದರಿಂದ ಆರಂಭದಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ದೂರನ್ನು ನೀಡಲಾಯಿತು. ನಂತರ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಯಿತು.ಜಿಲ್ಲಾಧಿಕಾರಿಗಳು ಮೆಸ್ಕಾಂ ಇ ಇ ಯವರಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು. ನಂತರ ಮೆಸ್ಕಾಂ ಎ.ಇ, ಮೆಸ್ಕಾಂ ಇ.ಇ , ಮೆಸ್ಕಾಂ ಜೆ ಇ ಗಮನಕ್ಕೂ ತರಲಾಯಿತು. ಸಚಿವ ಯು.ಟಿ.ಖಾದರ್ ಅವರಿಗೂ ದೂರು ನೀಡಲಾಯಿತು. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ದೂರು ನೀಡಲಾಯಿತು.ವೆುಸ್ಕಾಂನವರು ಕಂಬ ಹಾಕಲು ಬಂದರೆ ಅಬ್ದುಲ್ ರಹಮಾನ್ ಅಡ್ಡಿಪಡಿಸುವ ಕಾರಣಕ್ಕೆ ಪೊಲೀಸ್ ಕಮೀಷನರ್ ಅವರಿಗೂ ದೂರನ್ನು ನೀಡಲಾಯಿತು. ಎರಡು ಬಾರಿ ಪೊಲೀಸ್ ಕಮೀಷನರ್ ಕಚೇರಿಗೆ ದೂರನ್ನು ನೀಡಲು ಅಶ್ರಫ್ ಹೋದರೂ ಪ್ರಯೋಜನವಾಗಿಲ್ಲ. ಪೊಲೀಸ್ ಕಮೀಷನರ್ ಕೋಣಾಜೆ ಪೊಲೀಸ್ ಠಾಣೆಯ ಮುಖ್ಯಸ್ಥರಿಗೆ ಸಮಸ್ಯೆ ಪರಿಹರಿಸಲು ಸೂಚಿಸಿದರೂ ಪುತ್ತಬ್ಬ ಬ್ಯಾರಿ ಅವರ ಮನೆಯಲ್ಲಿ ಇನ್ನೂ ಬೆಳಕು ಮೂಡಿಲ್ಲ.
ವಿದ್ಯುತ್ ಕಂಬ ತುಂಡಾಗಿ ಬಿದ್ದ ನಂತರ ಮತ್ತೆ ಅದನ್ನು ಸರಿಪಡಿಸಲು ಅಬ್ದುಲ್ ರಹಮಾನ್ ಹಿಂದೆ ನಡೆದ ಘಟನೆಯನ್ನು ನೆಪವಾಗಿ ಇಟ್ಟುಕೊಂಡು ಅಡ್ಡಿಪಡಿಸುತ್ತಿದ್ದಾರೆ ಎಂಬುದು ಪುತ್ತಬ್ಬ ಬ್ಯಾರಿ ಮಗ ಮುಹಮ್ಮದ್ ಅಶ್ರಫ್ ಆರೋಪಿಸುತ್ತಿದ್ದಾರೆ. ಪುತ್ತಬ್ಬ ಬ್ಯಾರಿ ಮನೆ ಮುಂದೆ ಇದ್ದ ಕಾಲುದಾರಿಯನ್ನು ಅಗಲಗೊಳಿಸಲು 2 ಅಡಿ ಜಾಗವನ್ನು ಬಿಡಲು ಒಪ್ಪಲಾಗಿತ್ತು. ಆದರೆ ಅಬ್ದುಲ್ ರಹಮಾನ್ ಅವರು ಜೆಸಿಬಿ ತಂದು 6 ಅಡಿಯನ್ನು ಬಲವಂತವಾಗಿ ತೆಗೆದು ದಾರಿ ಮಾಡಿದ್ದರು. ಇದನ್ನು ಆಕ್ಷೇಪಿಸಿದಕ್ಕೆ ತಂದೆ, ತಾಯಿ ಮತ್ತು ನನಗೆ ಹಲ್ಲೆ ಮಾಡಲಾಗಿತ್ತು . ಈ ವಿವಾದದ ಮಧ್ಯೆ ಕಂಬ ಮುರಿದು ವಿದ್ಯುತ್ ಕಡಿತಗೊಂಡಿದ್ದು ಇದೀಗ ಅಬ್ದುಲ್ ರಹಮಾನ್ ಇದನ್ನೆ ನೆಪವಾಗಿಟ್ಟುಕೊಂಡು ವಿದ್ಯುತ್ ಕಂಬ ಹಾಕಲು ಅಡ್ಡಿಪಡಿಸುತ್ತಿದ್ದಾರೆ ಎಂದು ಮುಹಮ್ಮದ್ ಅಶ್ರಫ್ ಆರೋಪಿಸುತ್ತಿದ್ದಾರೆ.
ನೀರಿಗೂ ಸಮಸ್ಯೆ, ಮಕ್ಕಳ ಓದಿಗೂ ಸಮಸ್ಯೆ!
ವಿದ್ಯುತ್ ಕಡಿತದಿಂದ ತೀವ್ರ ಸಮಸ್ಯೆಯನ್ನು ಪುತ್ತಬ್ಬ ಬ್ಯಾರಿ ಕುಟುಂಬ ಎದುರಿಸುತ್ತಿದೆ. ವಿದ್ಯುತ್ ಕಡಿತದಿಂದ ಮನೆಗೆ ನೀರಿನ ಸಮಸ್ಯೆ ಎದುರಾಗಿದೆ. ಬೋರ್ ವೆಲ್ ನೀರು ತೆಗೆಯಲು ವಿದ್ಯುತ್ತಿಲ್ಲದೆ ಸಮಸ್ಯೆಯಾಗಿದೆ. ಮತ್ತೊಂದೆಡೆ ಶಾಲೆಗೆ ಹೋಗುವ ಮೂವರು ಮಕ್ಕಳಿದ್ದು ಅವರ ವಿದ್ಯಾಭ್ಯಾಸಕ್ಕೆ ತೊಡಕಾಗಿದೆ. ಅಬ್ದುಲ್ ರಹಮಾನ್ ಅವರು ರಸ್ತೆಗೆ ತಂತಿಯನ್ನು ಹಾಕಿ ಅಡ್ಡಿಪಡಿಸಿದ್ದು ಪುತ್ತಬ್ಬ ಅವರ ಕುಟುಂಬಕ್ಕೆ ದಾರಿಯೂ ಇಲ್ಲವಾಗಿದೆ. ಇವರಿದೀಗ ನೀರು ಹರಿಯುವ ಚರಂಡಿಯನ್ನು ಉಪಯೋಗಿಸುತ್ತಿದ್ದು ಜೋರಾಗಿ ಮಳೆ ಬಂದು ಚರಂಡಿಯಲ್ಲಿ ನೀರು ತುಂಬಿದರೆ ಮಕ್ಕಳಿಗೆ ಶಾಲೆಗೆ ಹೋಗಲು ಸಮಸ್ಯೆಯುಂಟಾಗಿದೆ.
ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರು ಕೋಣಾಜೆ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅವರಿಗೆ ಸಮಸ್ಯೆ ಪರಿಹರಿಸಲು ಸೂಚಿಸಿದ್ದಾರೆ. ಮೆಸ್ಕಾಂ ಇಲಾಖೆಯವರು ಜಿಲ್ಲಾಧಿಕಾರಿಗಳು ನೀಡಿದ ಸೂಚನೆಯನ್ನು ಇನ್ಸ್‌ಪೆಕ್ಟರ್ ಅವರಿಗೆ ನೀಡಿದ್ದಾರೆ. ಮೆಸ್ಕಾಂ ನಿಂದ ಕೋಣಾಜೆ ಪೊಲೀಸ್ ಠಾಣೆಗೆ ಕಂಬವನ್ನು ಅಳವಡಿಸಲು ಪೊಲೀಸ್ ರಕ್ಷಣೆ ನೀಡುವಂತೆ ಮನವಿಯನ್ನು ನೀಡಲಾಗಿದೆ. ಆದರೆ ಅದನ್ನು ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅವರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಮುಹಮ್ಮದ್ ಅಶ್ರಫ್ ಹೇಳುತ್ತಾರೆ.
ಪುತ್ತಬ್ಬ ಬ್ಯಾರಿಯವರ ಮನೆಯವರು ನಮ್ಮ ಮನೆಯ ಜಾಗದಲ್ಲಿ ಹಾದು ಹೋಗಬೇಕು. ಅವರು ನಮ್ಮ ಜಾಗವನ್ನು ಉಪಯೋಗಿಸುತ್ತಿದ್ದಾರೆ. ಅವರಲ್ಲಿ ಮೊದಲು ವಿನಂತಿಸಿ ರಸ್ತೆ ಮಾಡುವುದೆಂದು ನಿರ್ಣಯಿಸಲಾಗಿತ್ತು. ಅದರಂತೆ ಅವರ 2 ಅಡಿ ಜಾಗ ಮಾತ್ರ ಕೆಲವೆಡೆ ಬಳಕೆಯಾಗಿದೆ. ರಸ್ತೆಗಾಗಿ ನಾನು 6 ಲಕ್ಷ ಖರ್ಚು ಮಾಡಿದ್ದೇನೆ. ಆದರೆ ಅಷ್ಟು ಖರ್ಚು ಮಾಡಿದ ನಂತರ ರಸ್ತೆಯನ್ನು ಬಂದ್ ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರು ನಮ್ಮ ಜಾಗದಲ್ಲಿ ವಿದ್ಯುತ್ ಕಂಬವನ್ನು ಹಾಕಬಾರದು ಎಂಬುದು ನಮ್ಮ ವಾದ. ಅವರಿಗೆ ಕಂಬ ಹಾಕಲು ಪರ್ಯಾಯ ವ್ಯವಸ್ಥೆ ಇದೆ. ಅದನ್ನು ಅವರು ಮಾಡುವುದು ಬಿಟ್ಟು ನಮ್ಮ ಜಾಗದಲ್ಲಿಯೆ ಕಂಬ ಹಾಕುತ್ತೇವೆ ಎಂಬ ಸವಾಲನ್ನು ಹಾಕಿ ಅದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಈ ವಿಚಾರವನ್ನು ನಾನು ಬಂಟ್ವಾಳ ಸಿವಿಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಅಲ್ಲಿ ಬರುವ ತೀರ್ಪನ್ನು ಪಾಲಿಸುತ್ತೇನೆ. ಅವರು ರಸ್ತೆಯನ್ನು ಗ್ರಾಮಪಂಚಾಯತ್‌ಗೆ ಬಿಟ್ಟುಕೊಟ್ಟರೆ ಕ್ಷಣದಲ್ಲಿಯೆ ಈ ಸಮಸ್ಯೆಯನ್ನು ಪರಿಹರಿಸುತ್ತೇನೆ. ಮತ್ತೆ ಅವರು ಸಂಚರಿಸುವ ರಸ್ತೆಯನ್ನು ಬಂದ್ ಮಾಡಲಾಗಿಲ್ಲ. ಕಂಬ ತಂದು ಹಾಕದಂತೆ ತಂತಿಯನ್ನು ಅಡ್ಡ ಹಾಕಲಾಗಿದೆ.
- ಅಬ್ದುಲ್ ರಹಮಾನ್, ನೇರೋಳ್ತಡಿ ನಿವಾಸಿ
ಜಾಗದ ವಿವಾದಿಂದ ವಿದ್ಯುತ್ ಕಂಬವನ್ನು ಹಾಕಲು ಇನ್ನೂ ಸಾಧ್ಯವಾಗಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆಗೆ ಭದ್ರತೆ ನೀಡುವಂತೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿಯೆ ಸಮಸ್ಯೆ ಬಗೆಹರಿಸಲಾಗುವುದು.
-ಚಿಕ್ಕನಂಜಪ್ಪ, ಮ್ಯಾನೆಜಿಂಗ್ ಡೈರೆಕ್ಟರ್ , ಮೆಸ್ಕಾಂ
ಮೆಸ್ಕಾಂನವರು ಎರಡು ಸಲ ಕಂಬ ಅಳವಡಿಕೆಗೆ ಪೊಲೀಸ್ ಭದ್ರತೆ ಬೇಕೆಂದು ಕೇಳಿ ಬಂದಿದ್ದರು. ಅದರಂತೆ ಅವರಿಗೆ ಎರಡೂ ಬಾರಿಯೂ ಭದ್ರತೆಯನ್ನು ನೀಡಲಾಗಿದೆ. ಒಂದು ಬಾರಿ ಸಬ್ ಇನ್ಸ್‌ಪೆಕ್ಟರ್ ಅವರೆ ಖುದ್ದಾಗಿ ಸ್ಥಳಕ್ಕೆ ಭೆಟಿ ನೀಡಿದ್ದರು. ಆದರೆ ಅಲ್ಲಿಗೆ ಹೋದಾಗ ಅಲ್ಲಿ ಇದು ನಮ್ಮ ಖಾಸಗಿ ಜಾಗ. ಇಲ್ಲಿ ಹೇಗೆ ಕಂಬ ಅಳವಡಿಸುತ್ತೀರಿ ಎಂದು ಪ್ರಶ್ನಿಸುತ್ತಾರೆ. ಈ ಸಂಬಂಧ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆಯೂ ದೂರನ್ನು ದಾಖಲಿಸಲಾಗಿದೆ.
-ಅಶೋಕ್ ಕುಮಾರ್, ಇನ್ಸ್‌ಪೆಕ್ಟರ್, ಕೋಣಾಜೆ ಪೊಲೀಸ್ ಠಾಣೆ