ಮೂಡುಬಿದಿರೆ: ಹೆಗ್ಗಡೆ ಸಮುದಾಯದ ಅವಹೇಳನ - ಹೋರಾಟಕ್ಕೆ ಸಿದ್ಧತೆ
ಮೂಡುಬಿದಿರೆ,ಜೂ.18: ಎನ್. ಆರ್ ಹೆಗ್ಡೆ ಹಾಗೂ ಹಂಪಿ ವಿವಿಯ ಪ್ರೊಫೆಸರ್ ಡಾ. ಕೆ.ಎಂ. ಮೇತ್ರಿ ಎಂಬವರು ಇತ್ತೀಚೆಗೆ ಪ್ರಕಟಿಸಿದ "ತುಳುನಾಡು ಹೆಗ್ಗಡೆ ಸಮುದಾಯ" ಎಂಬ ಕೃತಿಯಲ್ಲಿ ಸಮಾಜವನ್ನು ಅವಹೇಳನಕಾರಿಯಾಗಿ ಬರೆದಿದ್ದು, ಈ ಕೃತಿಯನ್ನು ತಕ್ಷಣ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಲೇಖಕರ ಮತ್ತು ಪ್ರಕಾಶಕರ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆ ಹೂಡಲಾಗುವುದು ಎಂದು ವಿವಿಧ ಹೆಗ್ಗಡೆ ಸಮಾಜ ಸಂಘಟನೆಗಳು ಎಚ್ಚರಿಕೆ ನೀಡಿವೆ.
ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ, ಹೆಗ್ಗೆಡೆ ಸೇವಾ ಸಂಘ ಮುಂಬೈ ಹಾಗೂ ಹೆಗ್ಗಡೆ ಸೇವಾ ಸಂಘ ಬೆಂಗಳೂರು ಇದರ ಮುಂಖಡರು ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ನಡೆಸಿ ಪುಸ್ತಕದಲ್ಲಿ ಸಮಾಜವನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಬಗ್ಗೆ ಖಂಡಿಸಿ ಮುಂದಿನ ಹೋರಾಟದ ಕುರಿತು ವಿವರಣೆ ನೀಡಿದರು. ಸಮುದಾಯದವರು ಮೂಲ ಹಿಡುವಳಿದಾರರಾಗಿದ್ದಾರೆ. ಗುತ್ತಿನ ಮನೆಗಳು, ಕೋಟೆ ಮನೆಗಳನ್ನು ಹೊಂದಿದ್ದಾರೆ. ಊರಿನ ಮುಖ್ಯಸ್ಥ, ಶಾನುಭೋಗ, ಪಟೇಲ, ಆಡಳಿತಗಾರರಾಗಿ ಸಮಾಜದಲ್ಲಿ ಗೌರವದ ಸ್ಥಾನವನ್ನು ಪಡೆದಿದ್ದಾರೆ.
ಹೆಗ್ಗಡೆ ಸಮುದಾಯದ ಹುಟ್ಟಿನ ಕುರಿತು ಜನಪದ ಕಥೆಯೊಂದನ್ನು ಆಧಾರವಾಗಿಟ್ಟುಕೊಂಡು ಸಂಬಂಧವಿಲ್ಲದ ಸುಳ್ಳು ಇತಿಹಾಸವನ್ನು ಕೃತಿಯಲ್ಲಿ ದಾಖಲಿಸಿದ್ದಾರೆ. ಹೆಗ್ಗಡೆ ಹುಟ್ಟಿನ ಮೂಲಕ್ಕೂ ಈ ಕೃತಿಯಲ್ಲಿ ಉಲ್ಲೇಖಿಸಿರುವುದಕ್ಕೂ ಯಾವುದೇ ಸಂಬಂದವಿಲ್ಲ. ಈ ಕೃತಿಯನ್ನು ಸಮುದಾಯದ ವ್ಯಕ್ತಿಗಳು ಒಪ್ಪಬಾರದು. ಸರ್ಕಾರದಿಂದ ಮೀಸಲಾತಿ ಪಡೆಯಲು ಪ್ರವರ್ಗ 2 ಎ ಜಾತಿ ಪಟ್ಟಿಯಲ್ಲಿ ಸೇರಿಸುವ ದುರುದ್ಧೇಶದಿಂದ ಹಾಗೂ ವೈಯಕ್ತಿಕ ಲಾಭಕ್ಕಾಗಿ ಕೃತಿ ರಚಿಸಿದ್ದಾರೆ. ಈ ಜಾತಿಯ ಕುರಿತು ಸರ್ಕಾರಕ್ಕೆ ಈ ಪುಸ್ತಕದ ಮೂಲಕ ತಪ್ಪು ಮಾಹಿತಿ ನೀಡುವ ಹುನ್ನಾರವೂ ನಡೆದಿದೆ ಎಂದು ಅವರು ಆರೋಪಿಸಿದರು.
ಹೆಗ್ಗಡೆ ಸೇವಾ ಸಂಘ ಮುಂಬೈಯ ಅಧ್ಯಕ್ಷ ವಿಜಯ ಬಿ. ಹೆಗ್ಗಡೆ ಮಾತನಾಡಿ ಸರ್ಕಾರವು ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ನೀಡಲಿ. ಈ ಪುಸ್ತಕದಲ್ಲಿ ಉಲ್ಲೇಖಿಸಿದ ಮಾಹಿತಿಯಿಂದ ಮೀಸಲಾತಿ ಬೇಡ. ಕೃತಿಯ ಬಗ್ಗೆ ಸಮುದಾಯದ ಮುಖಂಡರೊಂದಿಗೆ ಪ್ರಕಟಣೆಗೂ ಮುನ್ನ ಚರ್ಚಿಸಿಲ್ಲ. ಹಲವು ಮಾಹಿತಿದಾರರ ಹೆಸರನ್ನು ಪುಸ್ತಕದಲ್ಲಿ ಉಲ್ಲೇಖಿಸಿದ್ದರೂ ಪ್ರಕಟಣೆಗೆ ಮುನ್ನ ಮಾಹಿತಿಯ ನಿಖರತೆಯ ಕುರಿತು ಲೇಖಕರು ಚರ್ಚಿಸಿಲ್ಲ. ಈ ಕೃತಿಯನ್ನು ಹಿಂಪಡೆದು ಆಕ್ಷೇಪಾರ್ಹ ವಿಷಯಗಳನ್ನು ಕೈಬಿಟ್ಟು ಸಮುದಾಯದ ಸಂಘದ ಅನುಮತಿ ಪಡೆದು ಪ್ರಕಟಿಸಲು ಸಮಾಜದ ಒಪ್ಪಿಗೆ ಇದೆ ಎಂದು ಒತ್ತಾಯಿಸಿದರು. ಬೆಂಗಳೂರು ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ದೇವೇಂದ್ರ ಹೆಗ್ಡೆ ಮಾತನಾಡಿ ಪುಸ್ತಕದ ಲೋಪದೋಷಗಳನ್ನು ವಿವರಿಸಿದರು. ಹೈಕೋರ್ಟ್ ನ್ಯಾಯವಾದಿ ಪ್ರಕಾಶ್ ಹೆಗ್ಡೆ, ಸಂಘದ ಕಾನೂನು ಸಲಹೆಗಾರ ನವೀನ್‌ಚಂದ್ರ ಹೆಗ್ಡೆ ಉಪಸ್ಥಿತರಿದ್ದರು.