ಉಪವಾಸದಿಂದ ಹಸಿವಿನ ಅರಿವು: ಡಾ.ಕೆ.ದೇವರಾಜ್
ಮಂಗಳೂರು, ಜೂ. 18: ಉಪವಾಸ ಆಚರಣೆಯಿಂದಲೇ ಹಸಿವು ಏನೆಂಬುದು ಗೊತ್ತಾಗುತ್ತದೆ. ಆದ್ದರಿಂದ ಆರ್ಥಿಕ ಸಬಲರು ದುರ್ಬಲರ ಹಸಿವು ನೀಗಿಸಲೆಂದೇ ಉಪವಾಸ ಮಹತ್ವ ಪಡೆದುಕೊಂಡಿದೆ ಎಂದು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಮ್ಯಾನೇಜ್‌ಮೆಂಟ್ ಕಾಲೇಜಿನ ನಿರ್ದೇಶಕ ಡಾ.ಕೆ.ದೇವರಾಜ್ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಶನಿವಾರ ನಗರದ ಐಎಂಎ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಅವರು ಮಾತನಾಡಿದರು.
ಜಗತ್ತಿನ ಮುಸ್ಲಿಮರ ಪಾಲಿಗೆ ರಮಝಾನ್ ವಿಶೇಷ ಮಾಸವಾಗಿರುವುದರಿಂದ ಈ ತಿಂಗಳಲ್ಲಿ ಮುಸ್ಲಿಮರು ಇತರ ತಿಂಗಳುಗಳಿಗಿಂತ ಹೆಚ್ಚು ನಿಷ್ಠೆ, ಶ್ರದ್ಧೆ ಮತ್ತು ಶಿಸ್ತು ಅಳವಡಿಸಿಕೊಂಡಿರುತ್ತಾರೆ. ಸೂರ್ಯೋದಯಕ್ಕಿಂತ ಮುಂಚಿನ ಅವಧಿಯಲ್ಲಿ ಆಹಾರವನ್ನು ಸೇವಿಸಿ ಸೂರ್ಯಾಸ್ತದವರೆಗೆ ಅನ್ನ ಪಾನೀಯವನ್ನು ತ್ಯಜಿಸುವ ಮೂಲಕ ದೇಹವನ್ನು ಸ್ವತಃ ದಂಡಿಸುವ ಮೂಲಕ ಹಸಿವಿನ ಅನುಭವ ಪಡೆಯುತ್ತಾರೆ. ಮಾತ್ರವಲ್ಲದೆ, ಹಸಿದವರಿಗೂ ಉಣಿಸುವ ಪ್ರೇರೇಪಣೆಯು ಈ ಉಪವಾಸದಿಂದಲೇ ಸಿಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ, ಧರ್ಮವನ್ನು ಸರಿಯಾಗಿ ಅರಿಯದೇ ಟೀಕಿಸುವುದರಿಂದ ಸಮಾಜದಲ್ಲಿ ಶಾಂತಿ, ಕೋಮು ಸೌಹಾರ್ದಕ್ಕೆ ಧಕ್ಕೆಯಾಗುತ್ತಿದೆ ಎಂದರು.
ಇಂತಹ ಟೀಕೆ ಮಾಡುವವನು ಮೊದಲು ತನ್ನ ಧರ್ಮವನ್ನು ಅರ್ಥೈಸಿಕೊಳ್ಳಬೇಕು. ಅನಂತರ ಇತರರ ಧರ್ಮವನ್ನು ಅಧ್ಯಯನ ನಡೆಸಬೇಕು ಎಂದವರು ಕಿವಿಮಾತು ಹೇಳಿದರು.
ಐವನ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ನಿರ್ದೇಶಕ ರಿಚರ್ಡ್ ಕ್ಯುಯೆಲ್ಲೋ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿದರು. ದುಬೈ ಮಾರ್ಕೆಟ್ ಸಿಟಿ ಮಸೀದಿಯ ಧರ್ಮಗುರು ಅಬೂಬಕರ್ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಬಿಷಪ್ ಹೌಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ವಿಲಿಯಂ ಮೆನೆಜಸ್, ಮೇಯರ್ ಹರಿನಾಥ್, ಪಾಲಿಕೆ ಆಡಳಿತ ಪಕ್ಷದ ಸಚೇತಕ ಶಶಿಧರ ಹೆಗ್ಡೆ, ಕಾಂಗ್ರೆಸ್ ಮುಖಂಡ ಸುರೇಶ್ ಬಲ್ಲಾಳ್, ಜಿಲ್ಲಾ ಪಂಚಾಯಿತಿ ಸದಸ್ಯ ಶಾಹುಲ್ ಹಮೀದ್, ವಕೀಲ ಸೀತಾರಾಮ ಶೆಟ್ಟಿ, ಉದ್ಯಮಿಗಳಾದ ಗಿಲ್ಬರ್ಟ್ ಡಿಸೋಜ, ಎ.ಸದಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.