ಮುಡಿಪು: ಸ್ಕಾರ್ಪಿಯೋ ವಾಹನದಲ್ಲಿ ಬಂದ ತಂಡದಿಂದ ಟೈಲರ್ ಅಪಹರಣ
ಕೊಣಾಜೆ: ಅಪರಿಚಿತರ ತಂಡ ಸ್ಕಾರ್ಪಿಯೋ ವಾಹನದಲ್ಲಿ ಮುಡಿಪುವಿನ ಟೈಲರ್ ಓರ್ವರನ್ನು ಅಪಹರಿಸಿರುವ ಘಟನೆ ಮುಡಿಪು ಜಂಕ್ಷನ್ನಿನಲ್ಲಿ ಶುಕ್ರವಾರ ತಡರಾತ್ರಿ ವೇಳೆ ನಡೆದಿದ್ದು, ಅಪಹರಣಗೈದ ತಂಡವು ಹಲ್ಲೆಗೈದು ಅವರಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ದರೋಡೆ ನಡೆಸಿ ಪುತ್ತೂರು ಸಮೀಪ ರಸ್ತೆಗೆ ಎಸೆದು ಹೋಗಿದ್ದಾರೆ.
ಮುಡಿಪುವಿನಲ್ಲಿ ಟೈಲರ್ ಅಂಗಡಿ ಹೊಂದಿರುವ ಮೂಲತ: ಮಾಣಿ ನಿವಾಸಿ ಧರಣಪ್ಪ ಪೂಜಾರಿ (42) ಅಪಹರಣಗೊಳಗಾದವರು. ಮುಡಿಪು ಪೋಸ್ಟ್ ಆಫೀಸ್ ಸಮೀಪ ಬಾಡಿಗೆ ಮನೆ ಹೊಂದಿರುವ ಅವರು ಶುಕ್ರವಾರ ತಡರಾತ್ರಿ 9.30 ಸುಮಾರಿಗೆ ಅಂಗಡಿಯನ್ನು ಮುಚ್ಚಿ ಹೋಗುವ ಸಂದರ್ಭ , ಆಗಂತುಕನೋರ್ವ ಗ್ರಾಹಕನ ಸೋಗಿನಲ್ಲಿ ಬಂದು ಪ್ಯಾಂಟ್ ಹೊಲಿಯಲಿದೆ ಎಂದು ತಿಳಿಸಿದ್ದಾನೆ. ಅದರಂತೆ ಅಂಗಡಿ ಮುಚ್ಚಿದ್ದರಿಂದಾಗಿ ಆತನಿದ್ದ ಸ್ಕಾರ್ಪಿಯೋ ಬಳಿ ತೆರಳುತ್ತಿದ್ದಂತೆ ಸ್ಕಾರ್ಪಿಯೋ ವಾಹನದಲ್ಲಿದ್ದ ನಾಲ್ವರು ಸೇರಿಕೊಂಡು ವಾಹನದೊಳಕ್ಕೆ ಧರಣಪ್ಪ ಅವರನ್ನು ಹಾಕಿ ಅಪಹರಿಸಿದ್ದಾರೆ. ಈ ಕುರಿತು ಕೊಣಾಜೆ ಠಾಣೆಯಲ್ಲಿ ಅವರ ಪತ್ನಿ ಜಯಲಕ್ಷ್ಮೀ ಎಂಬವರು ಅಪಹರಣ ಪ್ರಕರಣದ ಬಗ್ಗೆ ಶುಕ್ರವಾರ ತಡರಾತ್ರಿ ದೂರು ನೀಡಿದ್ದರು.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ದಾಖಲಾದ ಧರಣಪ್ಪ ಅವರ ಹೇಳಿಕೆಯಂತೆ ‘ ಮುಡಿಪುವಿನಿಂದ ಸ್ಕಾರ್ಪಿಯೋ ವಾಹನದಲ್ಲಿ ಅಪಹರಣಗೈದ ತಂಡ ಮೊದಲಿಗೆ ಕೇರಳ ಕಡೆಗೆ ಕೊಂಡೊಯ್ದಿತ್ತು. ಅಲ್ಲಿಂದ ಮರಳಿ ಮಂಗಳೂರು ಕಡೆಗೆ ಕೊಂಡೊಯ್ದಿದ್ದರು. ಬಳಿಕ ಉಪ್ಪಿನಂಗಡಿ ಕಡೆಗೆ ಕೊಂಡೊಯ್ಯುವ ಸಂದರ್ಭ ಸೇತುವೆಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿರುವುದನ್ನು ಕಂಡು ಅಲ್ಲಿಂದ ಹಿಂದಕ್ಕೆ ತೆರಳಿ ಹಲ್ಲೆಗೈದು ಕೈಯಲ್ಲಿದ್ದ ರೂ.10,000 ನಗದು ಹಾಗೂ ನಾಲ್ಕು ಪವನ್ ತೂಕದ ಚಿನ್ನದ ಸರವನ್ನು ಕಳವುಗೈದು, ವಾಹನದಿಂದ ಹೊರದೂಡಿ ಪರಾರಿಯಾಗಿದ್ದಾರೆ. ಗಾಯಗೊಂಡು ರಾತ್ರಿಯಿಡೀ ಸ್ಥಳ ಯಾವುದೆಂದು ತಿಳಿಯದೆ ಬಸ್ ನಿಲ್ದಾಣದಲ್ಲಿ ಮಲಗಿ ಬಳಿಕ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಶನಿವಾರ ಬೆಳಗ್ಗೆ ರಿಕ್ಷಾ ಮೂಲಕ ತೆರಳಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.