×
Ad

ಗೆದ್ದ ಖಾದರ್ ಖದರ್, ಸಚಿವ ಸ್ಥಾನ ಅಬಾಧಿತ

Update: 2016-06-18 22:48 IST

ಮಂಗಳೂರು, ಜೂ. 18: ಕೊನೆಗೂ ಖಾದರ್ ಖದರ್ ಗೆದ್ದಿದೆ. ಹೈಕಮಾಂಡ್ ಆಶೀರ್ವಾದದಿಂದ ಮಂತ್ರಿ ಪದವಿ ಮುಂದುವರಿದಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಈ ಬಾರಿ ಸಂಪುಟ ಪುನಾರಚನೆ ಸಂದರ್ಭ ಮಂತ್ರಿ ಪದವಿ ಕಳೆದುಕೊಳ್ಳುತ್ತಾರೆ ಎಂದು ಕೆಲವು ದಿನಗಳಿಂದ ಚಾಲ್ತಿಯಲ್ಲಿದ್ದ ಊಹಾಪೋಹ ಹಾಗು ಶುಕ್ರವಾರ ಬಹುತೇಕ ಖಚಿತ ಸುದ್ದಿಯೇ ಆಗಿದ್ದ ‘ಖಾದರ್ ನಿರ್ಗಮನ’ಕ್ಕೆ ಕೊನೆಗೂ ತೆರೆಬಿದ್ದಿದೆ. ಜೊತೆಗೆ ಸಚಿವ ಸ್ಥಾನ ಉಳಿದರೂ ಆರೋಗ್ಯ ಇಲಾಖೆ ಕೈತಪ್ಪಿಹೋಗಲಿದೆ ಎಂಬ ವದಂತಿ ಕೂಡ ಸುಳ್ಳಾಗಿದೆ.

 ಮಂತ್ರಿಯಾಗಿ ಮೊದಲ ಇನ್ನಿಂಗ್ಸ್ನಲ್ಲೇ ಆರೋಗ್ಯ ಇಲಾಖೆಯಂತಹ ಮಹತ್ವದ ಖಾತೆ ಪಡೆದ ಖಾದರ್ ಅದಕ್ಕೆ ನ್ಯಾಯ ಸಲ್ಲಿಸಲು ತಮ್ಮ ಹಾಗು ಸರಕಾರದ ಇತಿಮಿತಿಯಲ್ಲಿ ಸಾಕಷ್ಟು ಶ್ರಮ ಹಾಕಿದ್ದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ರಾಜ್ಯಾದ್ಯಂತ ಚುರುಕಿನ ಪ್ರವಾಸ, ಎಲ್ಲೆಡೆ ಜನರೊಡನೆ ಬೆರೆತು ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು, ಸರಕಾರೀ ಆಸ್ಪತ್ರೆಗಳಿಗೆ ಹಠಾತ್ ಭೇಟಿ ನೀಡುವುದು, ಜನರಿಗೆ ಸಮರ್ಪಕ ಸೇವೆ ನೀಡದ ವೈದ್ಯರಿಗೆ ಬಿಸಿ ಮುಟ್ಟಿಸುವುದು ಇವೆಲ್ಲವುಗಳ ಮೂಲಕ ಆರೋಗ್ಯ ಇಲಾಖೆಯನ್ನು ಜನರ ಬಳಿ ಕೊಂಡೊಯ್ಯುವಲ್ಲಿ ಹಾಗು ಕರಾವಳಿ ಪ್ರದೇಶದ ಗಡಿ ಮೀರಿ ಎಲ್ಲೆಡೆ ಜನರ ಪ್ರೀತಿ-ವಿಶ್ವಾಸ ಗಳಿಸುವಲ್ಲಿ ಅವರು ಸಫಲರಾಗಿದ್ದರು.

ರಾಜ್ಯ ಸರಕಾರದ ಕೆಲವು ಸಚಿವರ ಕಾರ್ಯವೈಖರಿಯ ಬಗ್ಗೆ ಟೀಕೆ ಕೇಳಿ ಬಂದಾಗಲೆಲ್ಲಾ ಖಾದರ್ ಮಾತ್ರ ಇದಕ್ಕೆ ಅಪವಾದ. ಅವರಂತಹ ದಕ್ಷ, ಸಕ್ರಿಯ ಹಾಗು ಜನರೊಂದಿಗೆ ಸದಾ ಬೆರೆಯುವ ಸಚಿವರು ಇನ್ನೂ ಹೆಚ್ಚು ಜನ ಬೇಕು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಿತ್ತು.
ಇನ್ನು ಬೈಕ್ ಆ್ಯಂಬುಲೆನ್ಸ್, ಅಪಘಾತ ಸಾಂತ್ವನ ಹರೀಶ್ ಯೋಜನೆ, ಆಶಾ ಕಾರ್ಯಕರ್ತರಿಗೆ ರಾಜ್ಯದಲ್ಲಿ ನೀಡುತ್ತಿದ್ದ ಗೌರವಧನ ಕೇಂದ್ರದಿಂದಲೂ ಸಿಗುವಂತೆ ಮಾಡಿದ್ದು, ತಾಲೂಕು ಮಟ್ಟದಲ್ಲಿ ಡಯಾಲಿಸಿಸ್ ಸೌಲಭ್ಯ ಇತ್ಯಾದಿ ವಿಶಿಷ್ಟ ಯೋಜನೆಗಳ ಮೂಲಕ ದೇಶದ ಗಮನ ಸೆಳೆದು ರಾಷ್ಟ್ರೀಯ ಪ್ರಶಸ್ತಿಯನ್ನೂ ರಾಜ್ಯ ಆರೋಗ್ಯ ಇಲಾಖೆ ಪಡೆಯುವ ಮೂಲಕ ಖಾದರ್ ಜನಪ್ರಿಯರಾದರು.

  ಇತ್ತೀಚಿಗೆ ಖಾದರ್ ವಿರುದ್ಧ ಬಿಜೆಪಿ ಮುಖಂಡ ರಮೇಶ್ ಭ್ರಷ್ಟಾಚಾರ ಆರೋಪ ಮಾಡಿದ್ದರು. ಈ ಆರೋಪವನ್ನು ಖಾದರ್ ಸಾರಾಸಗಟು ನಿರಾಕರಿಸಿ ಸ್ಪಷ್ಟೀಕರಣ ನೀಡಿ ಯಾವುದೇ ತನಿಖೆಗೆ ಸಿದ್ಧ ಎಂದು ಸಾರಿದ್ದರು. ಆ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಮಾಧ್ಯಮಗಳಲ್ಲಿ ಖಾದರ್ ಹೆಸರು ಮಂತ್ರಿ ಪದವಿ ಕಳೆದುಕೊಳ್ಳುವವರ ಪಟ್ಟಿಯಲ್ಲಿ ಬಂದಿದೆ. ಶುಕ್ರವಾರ ಖಾದರ್ ಮಂತ್ರಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ ಎಂದು ಸುದ್ದಿ ಹರಡಿತ್ತು. ಇದಕ್ಕೆ ಪೂರಕವಾಗಿ ಖಾದರ್ ಸಹ ‘ನಾನು ಪಕ್ಷದ ತೀರ್ಮಾನಕ್ಕೆ ಬದ್ಧ’ ಎಂದು ಹೇಳಿಕೆ ನೀಡಿದ್ದು, ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಶನಿವಾರ ಬೆಳಗ್ಗೆ ಖಾದರ್ ಸಂಪುಟದಿಂದ ಹೊರ ಹೋಗುತ್ತಾರೆ, ಅವರ ಸ್ಥಾನಕ್ಕೆ ಬೆಂಗಳೂರಿನ ಶಾಂತಿನಗರ ಶಾಸಕ ಎನ್.ಎ. ಹಾರಿಸ್ ಬರುತ್ತಾರೆ ಎಂದು ಟಿವಿ ಚಾನಲ್‌ಗಳಲ್ಲಿ ಸುದ್ದಿ ಹರಿದಾಡಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರೀ ಅಸಮಾಧಾನ, ವಿರೋಧ ವ್ಯಕ್ತವಾಯಿತು. ಅತ್ಯಂತ ಕ್ರೀಯಾಶೀಲ ಸಚಿವರನ್ನು ಕೈಬಿಟ್ಟರೆ ಸಿದ್ದು ಸರಕಾರಕ್ಕೆ ನಷ್ಟವಾಗಲಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೆ ಶನಿವಾರ ಮಧ್ಯಾಹ್ನ ಖಾದರ್ ಪಾಲಿನ ಆತಂಕ ದೂರವಾಗಿದೆ. ಆರೋಗ್ಯ ಸಚಿವರಾಗಿ ಖಾದರ್ ಮಾಡಿರುವ ಕೆಲಸವನ್ನು ಮೆಚ್ಚಿಕೊಂಡಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಖಾದರ್‌ರನ್ನೇ ಮುಂದುವರೆಸುವಂತೆ ಸ್ಪಷ್ಟವಾಗಿ ಹೇಳಿದ್ದಾರೆ. ಖಾದರ್ ಜೊತೆ ಮೊದಲಿಂದಲೂ ಆತ್ಮೀಯವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ , ಗೃಹ ಸಚಿವ ಪರಮೇಶ್ವರ್ ಕೂಡಾ ಖಾದರ್‌ರನ್ನು ಬೆಂಬಲಿಸಿರುವುದು ಗಮನಾರ್ಹ. ಅಲ್ಲಿಗೆ ಖಾದರ್ ಸಚಿವ ಸ್ಥಾನ ಭದ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News