ಬಾಳಿಗಾ ಹತ್ಯೆ ಪ್ರಕರಣ : ಮತ್ತೋರ್ವ ಆರೋಪಿಯ ಸೆರೆ
ಮಂಗಳೂರು, ಜೂ.18: ಆರ್‌ಟಿಐ ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಅವರ ಹತ್ಯಾ ಪ್ರಕರಣಕ್ಕೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಕಾವೂರು ಶಾಂತಿನಗರದ ನಿವಾಸಿ ಶ್ರೀಕಾಂತ್(42)ಬಂಧಿತ ಆರೋಪಿ. ಮಾರ್ಚ್ 21ರಂದು ನಗರದ ಕೊಡಿಯಾಲ್‌ಬೈಲ್ ಬೆಸೆಂಟ್ ಸ್ಕೂಲ್ 2ನೆ ಲೇನ್ ಸ್ಟರ್ಲಿಂಗ್ ಚೇಂಬರ್ ಹಿಂಬದಿ ರಸ್ತೆಯಲ್ಲಿ ಬಾಳಿಗಾರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಹತ್ಯೈಗೈದಿದ್ದರು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದೆ. ಉರ್ವಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವೀಶ್ ನಾಯ್ಕರ ನೇತೃತ್ವದ ತಂಡವು ಪ್ರಕರಣದ ಮತ್ತೋರ್ವ ಆರೋಪಿ ಶ್ರೀಕಾಂತ್‌ನನ್ನು ಮುಲ್ಕಿ ಬಳಿ ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದೆ. ಶ್ರೀಕಾಂತ್‌ನ ಸೆರೆಯಾಗುವುದರೊಂದಿಗೆ ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಒಟ್ಟು ಸಂಖ್ಯೆ 6ಕ್ಕೇರಿದೆ.