×
Ad

ಬಂಟ್ವಾಳ ನಗರ ಠಾಣೆಯಲ್ಲಿ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆ

Update: 2016-06-19 18:31 IST

ವಿಟ್ಲ, ಜೂ.19: ಬಂಟ್ವಾಳ ಸಮೀಪದ ಬಡ್ಡಕಟ್ಟೆ ವಾಣಿಜ್ಯ ಸಂಕೀರ್ಣದ ಬಳಿ ಸಾಕಷ್ಟು ಪ್ರಮಾಣದಲ್ಲಿ ಗುಂಡಿಗಳು ನಿರ್ಮಾಣಗೊಂಡಿದ್ದು, ಕೊಳಚೆ ನೀರು ಸಂಗ್ರಹವಾಗುತ್ತಿದೆ. ಈ ಬಗ್ಗೆ ಈಗಾಗಲೇ ಪುರಸಭೆಗೆ ಹಲವು ಬಾರಿ ದೂರಿಕೊಂಡರೂ ಸ್ಪಂದನೆ ಮಾತ್ರ ಶೂನ್ಯವಾಗಿದೆ. ತಾಲೂಕಿನಲ್ಲಿ ಡೆಂಗ್, ಮಲೇರಿಯಾ, ಇಲಿಜ್ವರದಂತಹ ಮಾರಕ ಸಾಂಕ್ರಮಿಕ ರೋಗಗಳು ಜನರನ್ನು ವಿಪರೀತವಾಗಿ ಕಾಡುತ್ತಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ. ಈ ನಿಟ್ಟಿನಲ್ಲಿ ತ್ಯಾಜ್ಯ ಸಂಗ್ರಹವಾಗುವಂತಹ ಗುಂಡಿಗಳನ್ನು ಮುಚ್ಚಿ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಪೊಲೀಸ್ ಇಲಾಖೆ ಪುರಸಭೆಗೆ ಮನವಿ ಮಾಡಬೇಕು ಎಂದು ವಿಶ್ವನಾಥ ಚೆಂಡ್ತಿಮಾರ್ ಆಗ್ರಹಿಸಿದ್ದಾರೆ.

ಬಂಟ್ವಾಳ ನಗರ ಠಾಣೆಯಲ್ಲಿ ರವಿವಾರ ನಡೆದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲ್ಲಿನ ಕೋರೆಗಳನ್ನು ಮಳೆಗಾಲ ಆರಂಭಕ್ಕೆ ಮುನ್ನವೇ ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಬಂಟ್ವಾಳ ತಾಲೂಕಿನ ಕಂಚಿನಡ್ಕಪದವು ಎಂಬಲ್ಲಿ ಕಲ್ಲಿನ ಕೋರೆಗಳು ಮರಣ ಮೃದಂಗ ಬಾರಿಸುತ್ತಿವೆ. ಯಾವುದೇ ಗುಂಡಿಯನ್ನೂ ಇದುವರೆಗೂ ಮುಚ್ಚುವ ಕಾರ್ಯ ನಡೆದಿಲ್ಲ. ಇದೀಗ ಮಳೆಗಾಲ ಪ್ರಾರಂಭಗೊಂಡಿದ್ದು, ಅದರಲ್ಲಿ ಮಳೆ ನೀರು ತುಂಬಿ ಅಪಾಯವನ್ನು ಆಹ್ವಾನಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಾಲಾ ವಾಹನಗಳ ನಿಯಮ ಉಲ್ಲಂಘನೆಯಿಂದ ಹಲವಾರು ಗಂಭೀರ ಅಪಘಾತಗಳು ಸಂಭವಿಸಿದ್ದರೂ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಪರಿಣಾಮ ಇನ್ನೂ ಕೂಡಾ ಶಾಲಾ ವಾಹನಗಳು ನಿಯಮ ಮೀರಿ ಸಂಚರಿಸುತ್ತಿದೆ. ಸಾರಿಗೆ ಇಲಾಖೆಯ ನಿಯಮ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳನ್ನು ರಿಕ್ಷಾ, ಟೆಂಪೊ ಹಾಗೂ ಬಸ್ಸುಗಳಲ್ಲಿ ತುಂಬಿಸಿಕೊಂಡು, ಬ್ಯಾಗ್‌ಗಳನ್ನು ಹೊರಭಾಗಕ್ಕೆ ಬರುವಂತೆ ನೇತಾಡಿಸಿಕೊಂಡು ಸಂಚರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಅಲ್ಲದೆ ಮಿತಿ ಮೀರಿದ ವೇಗಕ್ಕೂ ಕಡಿವಾಣ ಬಿದ್ದಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಸಭೆಯಲ್ಲಿ ಕೇಳಿ ಬಂತು.

ಸಮಾಜದಲ್ಲಿ ಮಿತಿ ಮೀರಿ ಬೆಳೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿಕೊಂಡು ರಾತ್ರಿ ಪಾಳಿಯ ಗಸ್ತನ್ನು ಹೆಚ್ಚಿಸಬೇಕು ಎಂಬ ಆಗ್ರಹವನ್ನೂ ಮಾಡಲಾಯಿತು.

ಬಂಟ್ವಾಳ ನಗರ ಠಾಣಾ ಎಸೈ ನಂದಕುಮಾರ್, ಗ್ರಾಮಾಂತರ ಠಾಣಾ ಎಸೈ ರಕ್ಷಿತ್ ಎ.ಕೆ., ಟ್ರಾಫಿಕ್ ಎಸೈ ಚಂದ್ರಶೇಖರಯ್ಯ, ಅಪರಾಧ ವಿಭಾಗದ ಎಸೈ ಗಂಗಾಧರಪ್ಪ, ಎಎಸೈಗಳಾದ ಸೇಸಮ್ಮ, ಒಮನ ಹಾಗೂ ಪೊಲೀಸ್ ಸಿಬ್ಬಂದಿ ಕೃಷ್ಣ, ಅಬ್ದುಲ್ ಕರೀಂ, ಕೃಷ್ಣ ನಾಯ್ಕ, ಲೋಕೇಶ್, ಜಗದೀಶ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News