ಮೋದಿ ಪದವಿಯ ಕುರಿತಾದ ಇನ್ನೊಂದು ಆರ್‌ಐಟಿ ಅರ್ಜಿ ಡಿಯುನಿಂದ ತಿರಸ್ಕೃತ
ಹೊಸದಿಲ್ಲಿ, ಜೂ.19: ಪ್ರಧಾನಿ ನರೇಂದ್ರ ಮೋದಿಯವರ ಕಾಲೇಜು ಪದವಿಯ ಕುರಿತು ಮಾಹಿತಿ ಕೋರಿದ್ದ ಇನ್ನೊಂದು ಆರ್‌ಟಿಐ ಮನವಿಯನ್ನು ‘ಖಾಸಗಿತನದ’ ಕಾರಣದಿಂದ ದಿಲ್ಲಿ ವಿಶ್ವವಿದ್ಯಾನಿಲಯವು ತಿರಸ್ಕರಿಸಿದೆ.
ದಿಲ್ಲಿಯ ವಕೀಲ ಮುಹಮ್ಮದ್ ಇರ್ಶಾದ್ ಎಂಬವರು ಈ ಅರ್ಜಿ ಸಲ್ಲಿಸಿದ್ದರು.
ಸಂಬಂಧಿತ ವಿದ್ಯಾರ್ಥಿಯೊಂದಿಗಿನ ಸಾರ್ವಜನಿಕ ವಿಶ್ವಾಸದ ಹೊಣೆಗಾರಿಕೆಯಿಂದಾಗಿ ದಿಲ್ಲಿ ವಿವಿಯು ವಿದ್ಯಾರ್ಥಿಯೊಬ್ಬನ ಕುರಿತಾದ ಮಾಹಿತಿಯನ್ನು ಇರಿಸಿಕೊಂಡಿರುವುದರಿಂದ, ನೀತಿಯ ದೃಷ್ಟಿಯಿಂದ ಪ್ರತಿ ವಿದ್ಯಾರ್ಥಿಯ ಖಾಸಗಿತನವನ್ನು ಕಾಯ್ದುಕೊಳ್ಳಲು ಬಯಸುತ್ತದೆಯೆಂದು ಆರ್‌ಟಿಐ ಮನವಿಗೆ ವಿವಿ ನೀಡಿರುವ ಉತ್ತರ ತಿಳಿಸಿದೆ.
ಮೋದಿಯವರ ಪದವಿ ನಕಲಿಯೆಂದು ಆರೋಪಿಸಿದ್ದ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ವಿವಿಯು ಮಾಹಿತಿಯನ್ನು ನಿರಾಕರಿಸುವಂತಿಲ್ಲ ಎಂದಿದ್ದಾರೆ.
ಇದು ಪ್ರಧಾನಿಯ ಪದವಿಯ ಕುರಿತಾದ ನಿಗೂಢತೆಯನ್ನು ಆಳವಾಗಿಸುತ್ತದೆ. ಅದು ಖಾಸಗಿ ಮಾಹಿತಿಯೆಂದು ವಿವಿ ಭಾವಿಸಿದ್ದರೆ, ಆರ್‌ಟಿಐ ಕಾಯ್ದೆಯ ಪ್ರಕಾರ ಅದು ಪ್ರಧಾನಿಗೆ ಪತ್ರ ಬರೆದು ಅವರ ಅನುಮತಿ ಕೇಳಬೇಕು. ವಿವಿ ತಿರಸ್ಕರಿಸುವಂತಿಲ್ಲವೆಂದು ಅವರು ಟ್ವೀಟಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ, ಪ್ರಧಾನಿಯ ಪದವಿ ಅಸಲಿಯಾದುದು. ಅದನ್ನು ದಿಲ್ಲಿ ವಿವಿಯಿಂದ ಯಾರೂ ಪಡೆಯಬಹುದೆಂದು ಹೇಳಿಲ್ಲವೇ? ಎಂದು ಕೇಜ್ರಿವಾಲ್ ರವಿವಾರ ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.