ರಾಜ್ಯ ಮಹಿಳಾ ವಿವಿ ಕುಲಪತಿಯಾಗಿ ಪ್ರೊ.ಸಬಿಹಾ ನೇಮಕ

Update: 2016-06-19 13:23 GMT

ಕೊಣಾಜೆ, ಜೂ.19: ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಮಂಗಳೂರು ವಿವಿಯ ಕನ್ನಡ ಅಧ್ಯಯನ ವಿಭಾಗದಲ್ಲಿ ಕಳೆದ 33 ವರ್ಷಗಳಿಂದ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೊ.ಸಬಿಹಾ ಭೂಮಿಗೌಡ ಆಯ್ಕೆಯಾಗಿದ್ದಾರೆ.

ವಿಶ್ರಾಂತ ಕುಲಪತಿ ಪ್ರೊ.ಗಜೇಂದ್ರಘಡ್‌ರ ಪುತ್ರಿಯಾಗಿರುವ ಇವರು ಸೈಂಟ್ ಆಗ್ನೇಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಭೂಮಿಗೌಡರ ಪತ್ನಿ. ಪ್ರಾಧ್ಯಾಪನದೊಂದಿಗೆ ಕವಯತ್ರಿಯಾಗಿ, ಬರಹಗಾರ್ತಿಯಾಗಿ, ಚಿಂತನಾಗಾರ್ತಿ, ಹೋರಾಟಗಾರ್ತಿಯಾಗಿ ಪ್ರೊ.ಸಬಿಹಾ ಗುರುತಿಸಿಕೊಂಡಿದ್ದರು. ಮಂಗಳೂರು ವಿವಿಯ ಕನ್ನಡ ಅಧ್ಯಯನ ವಿಭಾಗದಲ್ಲಿ ಸುಮಾರು 33 ವಷಗಳ ಬೋಧನಾನುಭವ ಹೊಂದಿರುವ ಇವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣ ಕತೆಗಳ ಹುಟ್ಟು ಮತ್ತು ಬೆಳವಣಿಗೆ’ ಕುರಿತು ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿವಿ ವಿಶ್ವವಿದ್ಯಾನಿಲಯ ಇವರಿಗೆ ಡಾಕ್ಟರೇಟ್ ಪದವಿ ನೀಡಿತ್ತು.

ಸಾಹಿತ್ಯ ವಿಮರ್ಶೆ, ಭಾಷಾ ವಿಜ್ಞಾನ, ಹೊಸಗನ್ನಡ ಸಾಹಿತ್ಯ ಮಹಿಳಾ ಅಧ್ಯಯನಗಳು ಪ್ರೊ.ಸಬಿಹಾ ಅವರ ತಜ್ಞತೆಯ ಕ್ಷೇತ್ರಗಳಾಗಿದ್ದು, ಮಹಿಳಾ ಸಾಹಿತ್ಯ ಚರಿತ್ರೆಯ ಯೋಜನೆ, ದಕ್ಷಿಣ ಕನ್ನಡ ಜಿಲ್ಲೆಯ ಅವಿವಾಹಿತ ಮಹಿಳೆ ಸಮಾಜ ಸಾಂಸ್ಕೃತಿಕ ಅಧ್ಯಯನ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಸ್ತ್ರೀವಾದಿ ಚಿಂತನೆಗಳು ಎಂಬ ಮೂರು ಮಹತ್ವದ ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಕನ್ನಡ ಭಾಷಾಭಿವೃದ್ಧಿ ಯೋಜನೆಯಲ್ಲಿ ‘ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಚಳವಳಿಗಳು, ಹೋರಾಟಗಳು’ ಎಂಬ ಸಂಶೋಧನಾ ಅಧ್ಯಯನವನ್ನು ಮಾಡಿದ್ದಾರೆ ಅಲ್ಲದೆ ಹತ್ತಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಡಾ.ಸಬಿಹಾ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಜಿಲ್ಲಾಧ್ಯಕ್ಷೆಯಾಗಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ , ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಮಂಗಳೂರು ವಿವಿಯ ಎಸ್ವಿಪಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷರಾಗಿ, ಮಂಗಳೂರು ವಿವಿ ಮಹಿಳಾ ಅಧ್ಯಯನ ಕೇಂದ್ರ ಮತ್ತು ಡಾ.ಕೆ.ಶಿವರಾಮ ಕಾರಂತ ಪೀಠದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News