×
Ad

ವಿವಿ ನಿರ್ದೇಶಕನ ವಿರುದ್ಧ ನರ್ಸಿಂಗ್ ವಿದ್ಯಾರ್ಥಿನಿಯಿಂದ ಅತ್ಯಾಚಾರ-ಬೆದರಿಕೆ ದೂರು

Update: 2016-06-19 19:16 IST

ವಡೋದರಾ, ಜೂ.19: ಇಲ್ಲಿಗೆ ಸಮೀಪದ ವಘೋಡಿಯದ ಖಾಸಗಿ ಸ್ವಾಮ್ಯದ ಪಾರುಲ್ ವಿಶ್ವವಿದ್ಯಾನಿಲಯದ ಸ್ಥಾಪಕಾಧ್ಯಕ್ಷ ಹಾಗೂ ಖ್ಯಾತ ಶಿಕ್ಷಣೋದ್ಯಮಿಯೊಬ್ಬರ ವಿರುದ್ಧ 21ರ ಹರೆಯದ ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾಳೆ.
ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿರುವ ನರ್ಸಿಂಗ್ ಸಂಸ್ಥೆಯ ವಿದ್ಯಾರ್ಥಿನಿಯರ ಹಾಸ್ಟೆಲ್‌ನ ಮಹಿಳಾ ರೆಕ್ಟರ್ ವಿರುದ್ಧವೂ ಅಪರಾಧಕ್ಕೆ ಪ್ರಚೋದನೆ ನೀಡಿದ ಆರೋಪವನ್ನು ಆಕೆ ಮಾಡಿದ್ದಾಳೆ.
ರೆಕ್ಟರ್ ಭಾವನಾ ಪಟೇಲ್ ಎಂಬವರು ತನ್ನನ್ನು ಹುಡುಡಿಯರ ಹಾಸ್ಟೆಲ್‌ನ ಬಳಿಯಿರುವ ಜಯೇಶ್ ಪಟೇಲ್ ಎಂಬವರ ನಿವಾಸಕ್ಕೆ ಕರೆದೊಯ್ದಿದ್ದರು. ಅಲ್ಲಿ 66ರ ಹರೆಯದ ಪಟೇಲ್ ತನ್ನ ಮೇಲೆ ಅತ್ಯಾಚಾರ ನಡೆಸಿದರೆಂದು ದೂರುದಾರೆ ಎಫ್‌ಐಆರ್‌ನಲ್ಲಿ ತಿಳಿಸಿದ್ದಾಳೆಂದು ವಡೋದರಾ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಸೌರಭ್ ತೊಲಂಬಿಯಾ ತಿಳಿಸಿದ್ದಾರೆ.
ತನ್ನನ್ನು ನಿನ್ನೆ ರಾತ್ರಿ ಪಟೇಲ್‌ರ ಮನೆಗೊಯ್ಯಲಾಯಿತು. ಅಲ್ಲಿ ಅವರು ತನ್ನ ಮೇಲೆ ಅತ್ಯಾಚಾರ ನಡೆಸಿದರು. ಈ ವಿಷಯವನ್ನು ಬಹಿರಂಗಪಡಿಸಿದಲ್ಲಿ ಸಂಸ್ಥೆಯಿಂದ ಉಚ್ಚಾಟಿಸುವೆ ಹಾಗೂ ನರ್ಸಿಂಗ್ ಕೋರ್ಸ್‌ನಲ್ಲಿ ಅನುತ್ತೀರ್ಣಗೊಳಿಸುವೆನೆಂದು ಪಟೇಲ್ ಬೆದರಿಕೆ ಹಾಕಿದರೆಂದು ವಿದ್ಯಾರ್ಥಿನಿ ತಿಳಿಸಿದ್ದಾಳೆಂದು ಅವರು ಹೇಳಿದ್ದಾರೆ.
ಗುರುವಾರ ರಾತ್ರಿಯೂ ಭಾವನಾ ತನ್ನನ್ನು ಪಟೇಲ್‌ರ ಮನೆಗೆ ಕರೆದೊಯ್ದಿದ್ದರು. ಆದರೆ, ಅಂದು ಅಪರಾಧ ನಡೆದಿಲ್ಲ. ಭಾವನಾರಿಗೆ ಅತ್ಯಾಚಾರ ನಡೆದಿರುವುದು ತಿಳಿದಿದೆ. ವಾಸ್ತವವಾಗಿ ಅವರೇ ಅದಕ್ಕೆ ಅನುಕೂಲ ಕಲ್ಪಿಸಿದ್ದರೆಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.
ಪಟೇಲ್ ಹಾಗೂ ಭಾವನಾರ ವಿರುದ್ಧ ವಘೋಡಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಪಟೇಲ್, ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಬಿಜೆಪಿ ಶಾಸಕ ಮಧು ಶ್ರೀವಾಸ್ತವ್‌ರ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News