ಯೋಗ ದಿನದ ನನ್ನ ಕರೆಗೆ ಇಷ್ಟೊಂದು ಭಾರೀ ಸ್ಪಂದನೆ ನಿರೀಕ್ಷಿಸಿರಲಿಲ್ಲ:ಪ್ರಧಾನಿ ಮೋದಿ
ಹೊಸದಿಲ್ಲಿ,ಜೂ.19: ವಿಶ್ವ ಯೋಗ ದಿನವನ್ನು ಆಚರಿಸಬೇಕೆಂಬ ತನ್ನ ಕರೆಗೆ ವಿಶ್ವಾದ್ಯಂತ ಇಷ್ಟೊಂದು ಭಾರೀ ಉತ್ಸಾಹವನ್ನು ತಾನು ನಿರೀಕ್ಷಿಸಿರಲಿಲ್ಲ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರು, ಯೋಗವು ದೈಹಿಕ ಕಸರತ್ತಿಗಿಂತ ಹೆಚ್ಚಿನದಾಗಿದೆ ಎಂದು ಒತ್ತಿ ಹೇಳಿದ್ದಾರೆ. ಮೋದಿಯವರ ಒತ್ತಾಸೆಯ ಮೇರೆಗೆ ವಿಶ್ವಸಂಸ್ಥೆಯು ಪ್ರತಿ ವರ್ಷ ಜೂನ್ 21ನ್ನು ವಿಶ್ವ ಯೋಗ ದಿನವೆಂದು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಘೋಷಿಸಿತ್ತು.
ಕಳೆದ ವರ್ಷ ಮತ್ತು ಈ ವರ್ಷ ಇನ್ನೊಮ್ಮೆ ಜನರ ಬೆಂಬಲ ಮತ್ತು ಪಾಲ್ಗೊಳ್ಳುವಿಕೆಯು ಈ ಪುರಾತನ ವಿದ್ಯೆಯನ್ನು ಪೋಷಿಸುವ ಮತ್ತು ಉತ್ತೇಜಿಸುವ ಬದ್ಧತೆಯನ್ನು ಪನರಾವರ್ತಿಸಿದೆ ಮತ್ತು ಯೋಗವು ‘ವಸುಧೈವ ಕುಟುಂಬಕಂ(ವಿಶ್ವ ಕುಟುಂಬ)’ನ ಆದರ್ಶಪ್ರಾಯ ಅಭಿವ್ಯಕ್ತಿಯಾಗಿದೆ ಎನ್ನುವುದನ್ನು ಮತ್ತೊಮ್ಮೆ ದೃಢಪಡಿಸಿದೆ ಎಂದು ಮಂಗಳವಾರ ನಡೆಯಲಿರುವ ಎರಡನೇ ವಿಶ್ವ ಯೋಗ ದಿನಾಚರಣೆಗೆ ಮುನ್ನ ವೀಡಿಯೊ ಸಂದೇಶದಲ್ಲಿ ಮೋದಿ ಹೇಳಿದ್ದಾರೆ.
ಕಳೆದ ವರ್ಷದ ಯೋಗ ದಿನಾಚರಣೆಯ ಚಿತ್ರಗಳು ತನ್ನ ಕಣ್ಣ ಮುಂದಿವೆ. ಪೆಸಿಫಿಕ್ ದ್ವೀಪಗಳಿಂದ ಪೋರ್ಟ್ ಆಫ್ ಸ್ಪೇನ್‌ವರೆಗೆ, ವ್ಲಾಡಿವೊಸ್ಟಕ್‌ನಿಂದ ವ್ಯಾಂಕೂವರ್ ಮತ್ತು ಕೋಪನ್ ಹೇಗನ್‌ನಿಂದ ಕೇಪ್‌ಟೌನ್‌ವರೆಗೆ ಸಾವಿರಾರು ಜನರು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಹೇಳಿದ್ದಾರೆ.
ಯೋಗವು ದೈಹಿಕ ವ್ಯಾಯಾಮಕ್ಕಿಂತ ಎಷ್ಟೋ ಮೇಲಿನದಾಗಿದೆ. ಅದು ನಮ್ಮತನದ ಹೊಸ ಆಯಾಮವನ್ನು ಕಂಡುಕೊಳ್ಳುವಂತೆ ಮಾಡುತ್ತದೆ, ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ ಎಂದು ಮೋದಿ ಹೇಳಿದ್ದಾರೆ.