ಋಣಾತ್ಮಕ ಧೋರಣೆಯಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತ: ಡಾ.ವಸಂತ ಕುಮಾರ್ ಪೆರ್ಲ

Update: 2016-06-19 14:29 GMT

ಮಂಗಳೂರು, ಜೂ.19: ತರಬೇತಾದ ಪರಿಣಿತ ಬೋಧಕ ವರ್ಗ, ಗುಣಮಟ್ಟದ ಶಿಕ್ಷಣ, ಉತ್ತಮ ವ್ಯವಸ್ಥೆಯು ಸರಕಾರಿ ಶಾಲೆಗಳಲ್ಲಿ ಇದ್ದರೂ ಜನರಲ್ಲಿರುವ ಪೂರ್ವಾಗ್ರಹ ಹಾಗೂ ಋಣಾತ್ಮಕ ಧೋರಣೆಯಿಂದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿವೆ ಎಂದು ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಡಾ.ವಸಂತ ಕುಮಾರ್ ಪೆರ್ಲ ಹೇಳಿದರು.

ಅವರು ನಗರದ ಬಲ್ಮಠ ಕೆ.ಟಿ.ಸಿ ಕಾಲೇಜಿನ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ಕೊಪ್ಪದ ವರ್ಣ ಪ್ರತಿಷ್ಠಾನವು ಮಂಗಳೂರಿನ ಕಾಸಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಅಕ್ಷರ ತೇರು ಸಾವಿರದ ವಸಂತ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕ ವಲಯದಲ್ಲಿ ಸರಕಾರಿ ಶಾಲೆಗಳ ಕುರಿತು ಧನಾತ್ಮಕ ಚಿಂತನೆ ಮೂಡಿಸುವ ಪ್ರಯತ್ನಗಳು ನಡೆಯಬೇಕು. ಮಕ್ಕಳನ್ನು ಸೃಜನಶೀಲ ಚಟುವಟಿಕೆಗಳಿಗೆ ಪ್ರೇರೇಪಿಸುವ ಶಿಕ್ಷಣದ ಅಗತ್ಯವಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಅಬ್ದುರ್ರಹ್ಮಾನ್ ಟಿ.ಕೆ., ಮಕ್ಕಳಲ್ಲಿ ಕನಸುಗಳನ್ನು ಬಿತ್ತಿ ಅವುಗಳನ್ನು ಸಾಕಾರಗೊಳಿಸಲು ಪ್ರೇರೇಪಣೆ ನೀಡುವ ಕಾರ್ಯ ಶಿಕ್ಷಣ ಮೂಲಕ ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಸಸ್ ಸಂಸ್ಥೆಯ ಕಾರ್ಯದರ್ಶಿ ಹನಿ ಕಬ್ರಾಲ್, ಶಾಸಕ ಜೆ.ಆರ್. ಲೋಬೊ, ಎ.ಜೆ. ಆಸ್ಪತ್ರೆ ವೈದ್ಯಾಧಿಕಾರಿ ಡಾ. ಇ.ವಿ.ಎಸ್ ಸುದರ್ಶನ್ ಮಾಬೆನ್, ವಿನೀತ್, ಸ್ವರೂಪ, ಅಕ್ಷತಾ, ಲವೀನಾ, ರೆಹಮಾನ್ ಖಾನ್ ಕುಂಜತ್ತಬೈಲ್ ಉಪಸ್ಥಿತರಿದ್ದರು. ಚೇತನ್ ಕೊಪ್ಪ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News