ಎಸೆಸೆಲ್ಸಿಯಲ್ಲಿ ತುಳು ಭಾಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

Update: 2016-06-19 14:36 GMT

ಮಂಗಳೂರು, ಜೂ.19: ಎಸೆಸೆಲ್ಸಿ ಪರೀಕ್ಷೆಯಲ್ಲಿ ತುಳು ಭಾಷಾ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಖಿಲ ಭಾರತ ತುಳು ಒಕ್ಕೂಟ ವತಿಯಿಂದ ಕಾವೂರಿನಲ್ಲಿ ಇಂದು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ತುಳು ಭಾಷೆ ಉಳಿಯಬೇಕಾದರೆ ಶಿಕ್ಷಣ ಸಂಸ್ಥೆಗಳಲ್ಲಿ ತುಳು ಶಿಕ್ಷಣ ವ್ಯವಸ್ಥೆ ಜಾರಿಗೊಳಿಸುವ ಅಗತ್ಯವಿದೆ. ತುಳು ಭಾಷೆಯಲ್ಲಿ ಮಕ್ಕಳ ಸಾಹಿತ್ಯ ಕೃತಿಗಳ ಸಂಖ್ಯೆ ಹೆಚ್ಚಬೇಕಾಗಿದೆ. ಪಿಯುಸಿಯಲ್ಲೂ 3ನೆ ಭಾಷೆಯಾಗಿ ತುಳು ಅಧ್ಯಯನಕ್ಕೆ ಸರಕಾರ ಮಾನ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಇತ್ತೀಚಿನ ದಿನಗಳಲ್ಲಿ ತುಳು ಭಾಷಾಭಿಮಾನ, ಸಂಸ್ಕೃತಿಯ ಮೇಲಿನ ಪ್ರೀತಿ ಹೆಚ್ಚುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಹೀಗಾಗಿ ತುಳು ಭಾಷೆ ಅಳಿಯುವ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ, ರಾಮಕುಂಜದ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕ ಕೆ. ಶೇಶಪ್ಪ ರೈ, ಉದ್ಯಮಿ ಬಿ. ಲಕ್ಷ್ಮಣ ಶೆಟ್ಟಿ, ಪುತ್ತೂರು ಪ್ರಗತಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಗಿರಿಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News