ಶೀಘ್ರವೇ ಗೃಹರಕ್ಷಕದಳಕ್ಕೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಪೂರೈಕೆ: ಎಸ್ಪಿ ಭೂಷಣ್ ಬೊರಸೆ

Update: 2016-06-19 14:47 GMT

ಮಂಗಳೂರು, ಜೂ.19: ನೆರೆ ಸಂಭವಿಸಿದ ಸಂದರ್ಭದಲ್ಲಿ ಸಮಸ್ಯೆಗೆ ಸಿಲುಕುವ ಜನರನ್ನು ರಕ್ಷಿಸಲು ಗೃಹರಕ್ಷಕಾ ದಳ ಘಟಕಕ್ಕೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಶೀಘ್ರವೇ ಒದಗಿಸಲಾಗುವುದು ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ ಹೇಳಿದರು.

ಅವರು ಇಂದು ನಗರದ ಮೇರಿಹಿಲ್‌ನಲ್ಲಿರುವ ಗೃಹ ರಕ್ಷಕ ದಳದ ಕಚೇರಿಯಲ್ಲಿ ನಡೆದ ಘಟಕಾಧಿಕಾರಿಗಳ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿದರು.

ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಒತ್ತು ನೀಡಲಾಗಿದೆ. ಈಗಾಗಲೇ ನೆರೆ ಬರುವ ಪ್ರದೇಶಗಳನ್ನು ಗುರುತಿಸಿ, ಸ್ಥಳೀಯರ ಹೆಸರು, ದೂರವಾಣಿ ಸಂಖ್ಯೆಯನ್ನು ದಾಖಲಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಅವಘಡ ಸಂಭವಿಸಿ ಜನತೆ ಸಮಸ್ಯೆಗೆ ಸಿಲುಕಿದರೆ ತಕ್ಷಣ ಅವರ ರಕ್ಷಣೆಗೆ ಧಾವಿಸಬೇಕಿದೆ. ಗೃಹರಕ್ಷಕಾ ದಳಕ್ಕೆ ನೀಡಲಾಗುವ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಡೆಟ್ಟಾಲ್, ಗ್ಲೌಸ್, ಬ್ಯಾಂಡೇಜ್ ಬಟ್ಟೆ ಮುಂತಾದ ಪರಿಕರಗಳ ಇರಲಿವೆ ಎಂದು ಹೇಳಿದರು.

ಗೃಹರಕ್ಷಕದಳದ ಕಮಾಂಡೆಂಟ್ ಡಾ.ಮುರಳೀ ಮೋಹನ ಚೂಂತಾರು ಮಾತನಾಡಿ, ದ.ಕ.ಜಿಲ್ಲೆಯಲ್ಲಿರುವ 14 ಗೃಹ ರಕ್ಷಕ ದಳದ ಘಟಕಗಳಲ್ಲಿ 800 ರಿಂದ 1,000 ಗೃಹರಕ್ಷಕರಿದ್ದಾರೆ . ಮಳೆಗಾಲದ ನೆರೆ ಪರಿಸ್ಥಿತಿಯನ್ನು ಎದುರಿಸಲು 75 ಮಂದಿ ಗೃಹರಕ್ಷಕರನ್ನು ವಿಶೇಷವಾಗಿ ನೇಮಕ ಮಾಡಲಾಗಿದೆ. ಪರಿಹಾರ ಕ್ರಮ ಕೈಗೊಳ್ಳಲು ಬೇಕಾದ ಅಸ್ಕಾ ಲೈಟ್, ಜಾಕೆಟ್, ರೋಪ್, ಹೆಲ್ಮೆಟ್ ಮತ್ತಿತರ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದರು.

ಡೆಪ್ಯುಟಿ ಕಮಾಂಡೆಂಟ್ ರಮೇಶ್, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಸ್ಟಾಫ್ ಆಫಿಸರ್ ಉಷಾ, ಸೆಕೆಂಡ್ ಇನ್ ಕಮಾಂಡೆಂಟ್ ಮುಹಮ್ಮದ್ ಇಸ್ಮಾಯೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News