ಮಂಗಳೂರಿನಲ್ಲಿ ಹೊರಜಿಲ್ಲೆಗಳ ಪೊಲೀಸರಿಗೆ ತುಳು ಡಿಪ್ಲೊಮಾ ಕೋರ್ಸ್
ಮಂಗಳೂರು, ಜೂ. 19: ಕರಾವಳಿ ಜಿಲ್ಲೆಯಲ್ಲಿ ಪ್ರಮುಖ ವ್ಯಾವಹಾರಿಕ ಮತ್ತು ಆಡುಭಾಷೆ ತುಳು. ತುಳುಭಾಷೆಯನ್ನು ಹೆಚ್ಚು ಮಾತನಾಡುವ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ತುಳು ಭಾಷೆ ಬಾರದ ಪೊಲೀಸರು ಹೆಚ್ಚು ಕಾರ್ಯನಿರ್ವಹಿಸುತ್ತಾರೆ. ತುಳು ಭಾಷೆಯನ್ನು ಅರ್ಥೈಸಿಕೊಳ್ಳಲಾಗದ ಪೊಲೀಸರಿಗೆ ಮಂಗಳೂರಿನಲ್ಲಿ ಇದಿಗ ತುಳು ಭಾಷೆಯನ್ನು ಕಲಿಸುವ ಪ್ರಕ್ರಿಯೆ ಮಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇತ್ತೀಚೆಗೆ ಆರಂಭವಾಗಿದೆ.
ತುಳು ಭಾಷೆ ಗೊತ್ತಿಲ್ಲದ ಒಂದು ಠಾಣೆಯ ಇಬ್ಬರಂತೆ ಒಟ್ಟು 22 ಮಂದಿ ಪೊಲೀಸರು ಮೊದಲ ತಂಡದಲ್ಲಿ ತುಳು ಕಲಿಯುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಅಂಚೆ ತೆರಪಿನ ಶಿಕ್ಷಣ ವಿಭಾಗವು ತುಳು ಡಿಪ್ಲೊಮಾ ಕೋರ್ಸು ನಡೆಸುತ್ತಿದ್ದು ಇವರಿಗೆ 10 ದಿನಗಳ ಕೋರ್ಸು ನೀಡಲಾಗುತ್ತಿದೆ.
ಪೊಲೀಸರು ಜನರೊಂದಿಗೆ ನೇರ ಸಂಪರ್ಕದಲ್ಲಿರಲು ತುಳು ಭಾಷೆಯನ್ನು ಪೊಲೀಸರು ತಿಳಿದುಕೊಳ್ಳುವುದು ಅಗತ್ಯವಿರುವುದರಿಂದ ಈ ಪ್ರಯತ್ನವನ್ನು ಮಾಡಲಾಗುತ್ತಿದೆ.
ಮಂಗಳೂರು ಪೊಲೀಸ್ ಕಮಿಷನರೆಟ್‌ನಲ್ಲಿ ಇರುವ ಸುಮಾರು 800 ಮಂದಿ ಪೊಲೀಸರ ಪೈಕಿ ಶೇ.30ರಷ್ಟು ಮಂದಿ ಹೊರ ಜಿಲ್ಲೆಯವರು. ಅವರಿಗೆ ಕರಾವಳಿ ಜಿಲ್ಲೆಗಳ ತುಳು, ಬ್ಯಾರಿ, ಕೊಂಕಣಿ ಭಾಷೆ ಬರುವುದಿಲ್ಲ. ಇಲ್ಲಿ ತುಳು ವ್ಯಾವಹಾರಿಕ ಭಾಷೆ ಆಗಿರುವುದರಿಂದ ಈ ಭಾಷೆಯ ಕನಿಷ್ಠ ಜ್ಞಾನವಾದರೂ ಇರಬೇಕೆಂದು ತೀರ್ಮಾನಿಸಿ, ಹೊರ ಜಿಲ್ಲೆಗಳಿಂದ ಬಂದಿರುವ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ತುಳು ಕಲಿಸಲು ಮಂಗಳೂರು ಪೊಲೀಸ್ ಇಲಾಖೆ ನಿರ್ಧರಿಸಿದೆ.
ವಿ.ವಿ. ಕಾಲೇಜಿನ ವಾಣಿಜ್ಯ ಉಪನ್ಯಾಸಕ ಮತ್ತು ತುಳು ಡಿಪ್ಲೊಮಾ ಕೋರ್ಸಿನ ಸಂಯೋಜಕ ಡಾ. ಯತೀಶ್ ಅವರು ತುಳು ಕಲಿಕೆಯ ಸಂಯೋಜಕರಾಗಿದ್ದಾರೆ. ಡಾ.ವಿಶ್ವನಾಥ ಬದಿಕಾನ ಮತ್ತು ಡಾ.ಕಿಶೋರ್ ಕುಮಾರ್ ಶೇಣಿ ಅವರು ತುಳು ಭಾಷೆಯನ್ನು ಪೊಲೀಸರಿಗೆ ಕಲಿಸುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ಇಲ್ಲಿಯೆ ಕೆಲಸ ಮಾಡುತ್ತಿರುವುದುರಿಂದ ಕೆಲವೊಂದು ತುಳು ಪದಗಳನ್ನು ತಿಳಿದುಕೊಂಡಿದ್ದೆ. ಇದೀಗ ತುಳು ಕೋರ್ಸ್ ಕಲಿತಿರುವುದರಿಂದ ನಿರರ್ಗಳವಾಗಿ ತುಳು ಭಾಷೆಯನ್ನು ಮಾತನಾಡಲು ಸಾಧ್ಯವಾಗಿದೆ. ಮಂಗಳೂರಿನಲ್ಲಿ ಕೆಲಸ ಮಾಡುವುದಿದ್ದರೆ ತುಳು ಭಾಷೆ ತಿಳಿದುಕೊಂಡಿರುವುದು ಅಗತ್ಯವಿದೆ. ತುಳು ಕೋರ್ಸ್ ಕಲಿತಿರುವುದರಿಂದ ನನಗಂತೂ ತುಂಬಾ ಉಪಯೋಗವಾಗಿದೆ.
-ಕೀರ್ತಿ, ಕದ್ರಿ ಠಾಣಾ ಸಿಬ್ಬಂದಿ , (ಕುಂದಾಪುರ ತಾಲೂಕಿನವರು)
ಮಂಗಳೂರಿನ ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರು ಇತ್ತೀಚೆಗೆ ವಿ.ವಿ. ಕಾಲೇಜಿಗೆ ಭೇಟಿ ನೀಡಿದಾಗ ಪೊಲೀಸರಿಗೆ ತುಳು ಡಿಪ್ಲೊಮಾ ಕೋರ್ಸು ಕಲಿಸುವ ವಿಷಯ ಪ್ರಸ್ತಾಪವಾಗಿತ್ತು. ನಮ್ಮ ಕಾಲೇಜಿನಲ್ಲಿ ತುಳು ಡಿಪ್ಲೋಮ ಕಲಿಸುತ್ತಿರುವುದರಿಂದ ನಮ್ಮಲ್ಲಿರುವ ತಜ್ಞರಿಂದ ಇದೀಗ ಪೊಲೀಸರಿಗೆ ತುಳು ಕಲಿಸುವ ವ್ಯವಸ್ಥೆ ಮಾಡಲಾಗಿದೆ.
- ಡಾ. ಉದಯ ಕುಮಾರ್ ಇರ್ವತ್ತೂರು, ಪ್ರಾಂಶುಪಾಲರು, ವಿ.ವಿ. ಕಾಲೇಜು