ಕೆಎಸ್ಸಾರ್ಟಿಸಿ ಬಸ್-ಕಾರು ಢಿಕ್ಕಿ: ಓರ್ವ ಮೃತ್ಯು; ನಾಲ್ವರು ಗಂಭೀರ
ಉಪ್ಪಿನಂಗಡಿ, ಜೂ.19: ಕೆಎಸ್ಸಾರ್ಟಿಸಿ ಬಸ್ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಸ್ಥಳದಲ್ಲಿಯೇ ಮೃತಪಟ್ಟು ಇತರ ನಾಲ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕೋಲ್ಪೆಎಂಬಲ್ಲಿ ರವಿವಾರ ನಡೆದಿದೆ.
ಬೆಂಗಳೂರು ನಿವಾಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಸರ್ಜಾಪುರ ನಿವಾಸಿ ಅಶೋಕ್ ರೆಡ್ಡಿ (46) ಮೃತಪಟ್ಟ ವ್ಯಕ್ತಿ. ರಾಜಪ್ಪರೆಡ್ಡಿ (44), ಮುನಿ ರೆಡ್ಡಿ (43), ಪ್ರಶಾಂತ್ (30) ಮುನಿಯಮ್ಮ (65) ಎಂಬವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಮತ್ತು ಗಾಯಾಳುಗಳು ಒಂದೇ ಕುಟುಂಬದವರಾಗಿದ್ದು ಮೂಡಬಿದ್ರೆಯ ಆಳ್ವಾಸ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಮಕ್ಕಳನ್ನು ಭೇಟಿ ಮಾಡಲೆಂದು ಆಗಮಿಸಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ.
ಮಂಗಳೂರು ಕಡೆಯಿಂದ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಟ್ಯಾಂಕರೊಂದನ್ನು ಓವರ್‌ಟೇಕ್ ಮಾಡುವ ವೇಗದಲ್ಲಿ ನೆಲ್ಯಾಡಿ ಕಡೆಯಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಬಸ್ಸು ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನ ಮುಂಭಾಗದಲ್ಲಿ ಕುಳಿತಿದ್ದ ಅಶೋಕ್ ರೆಡ್ಡಿಯವರ ತಲೆಗೆ ಗಂಭೀರ ಗಾಯವಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಾಳುಗಳ ಪೈಕಿ ಗಂಭೀರ ಗಾಯಗೊಂಡಿದ್ದ ಮುನಿಯಮ್ಮ ಹಾಗೂ ಇತರ ಇಬ್ಬರನ್ನು ನೆಲ್ಯಾಡಿಯಿಂದ ಆಗಮಿಸಿದ್ದ ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧತಾಸು ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ನೆಲ್ಯಾಡಿ ಹೊರಠಾಣೆ ಸಿಬ್ಬಂದಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟು ಪರಿಸ್ಥಿತಿ ಸುಧಾರಿಸಿದರು. ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಅನಿಲ್ ಕುಲಕರ್ಣಿ, ಉಪ್ಪಿನಂಗಡಿ ಎಸೈ ತಿಮ್ಮಪ್ಪನಾಯ್ಕಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.