ವೀರಕಂಭ: ಮರ ಉರುಳಿಬಿದ್ದು ಮೂರು ಮನೆ ಸಹಿತ ಗುಡಿ, ವಿದ್ಯುತ್ ಕಂಬಕ್ಕೆ ಹಾನಿ
ಬಂಟ್ವಾಳ, ಜೂ. 19: ಬೃಹತ್ ಗಾತ್ರದ ಮರವೊಂದು ಬುಡ ಸಹಿತ ಉರುಳಿ ಬಿದ್ದ ಪರಿಣಾಮ ಮೂರು ಮನೆಗಳು ಮತ್ತು ಗುಡಿ ಹಾಗೂ ವಿದ್ಯುತ್ ಕಂಬ ಹಾನಿಗೊಂಡು ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ತಾಲೂಕಿನ ವೀರಕಂಭ ಗ್ರಾಮದ ಕೇಪುಲಕೋಡಿ ಎಂಬಲ್ಲಿ ರವಿವಾರ ಸಂಜೆ ಸಂಭವಿಸಿದೆ.
ವೀರಕಂಭ ಗ್ರಾಮದ ಎರ್ಮೆಮಜಲು- ಬಾಯಿಲ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡವಾಗಿ ಮರ ಉರುಳಿ ಬಿದ್ದಿರುವುದರಿಂದ ಕೆಲಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಘಟನೆಯಿಂದ ಇಲ್ಲಿನ ನಿವಾಸಿ ಕೊರಗಪ್ಪ ಪೂಜಾರಿ ಮತ್ತು ಚಂದ್ರಶೇಖರ ಪೂಜಾರಿ ಎಂಬವರ ಮನೆಯ ತಾರಸಿ ಮತ್ತು ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಸ್ಥಳೀಯ ನಿವಾಸಿ ಪದ್ಮನಾಭ ಪೂಜಾರಿ ಎಂಬವರ ಹೆಂಚಿನ ಮನೆಯ ಛಾವಣಿ ಕೂಡಾ ಹಾನಿಗೀಡಾಗಿದೆ. ಮನೆ ಎದುರಿನ ತೆಂಗಿನ ಮರ ಕೂಡಾ ಬಿದ್ದಿದೆ. ಈ ಎರಡು ಮನೆಗಳ ಆವರಣ ಗೋಡೆಗಳು ಕುಸಿದು ಬಿದ್ದಿದ್ದು, ಘಟನೆ ವೇಳೆ ಮನೆಯೊಳಗೆ ಜನರಿದ್ದರೂ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.
ಮರ ಉರುಳಿದ ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದಿದ್ದು ಇನ್ನೆರಡು ಕಂಬಗಳು ವಾಲಿಕೊಂಡು ವಿದ್ಯುತ್ ತಂತಿ ಕೂಡಾ ಜೋತು ಬಿದ್ದು ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಮರದ ಬುಡದಲ್ಲಿ ಇದ್ದ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಗಳ ಕಟ್ಟೆಗೆ ಹಾನಿ ಉಂಟಾಗಿದೆ.