×
Ad

ಡೆಂಗ್ ಭೀತಿ: ರಾಯಿ ಪೇಟೆಯಲ್ಲಿ ಚರಂಡಿ ಮುಚ್ಚಲು ಆಗ್ರಹ

Update: 2016-06-19 23:56 IST

ವಿಟ್ಲ, ಜೂ.19: ಬಂಟ್ವಾಳ ತಾಲೂಕಿನಲ್ಲಿ ಶಂಕಿತ ಡೆಂಗ್ ಪೀಡಿತ ಪ್ರದೇಶವಾಗಿರುವ ರಾಯಿ ಗ್ರಾಪಂ ವ್ಯಾಪ್ತಿಯ ರಾಯಿ ಪೇಟೆಯ ರಿಕ್ಷಾ ನಿಲುಗಡೆ ಬಳಿಯ ಚರಂಡಿ ಬಾಯಿ ತೆರೆದ ಸ್ಥಿತಿಯಲ್ಲಿದ್ದು, ಕೊಳಚೆ ತ್ಯಾಜ್ಯಗಳು ಮೇಲ್ಭಾಗಕ್ಕೆ ಕಾಣಿಸುವಂತಿದೆ. ಕೂಡಲೇ ಇದನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯ ಕಾಪಾಡುವಂತೆ ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಹಿಂದೆ ಚಿಕುನ್‌ಗುನ್ಯಾ ನೋವು ಅನುಭವಿಸಿದ್ದ ಅರಳ, ರಾಯಿ, ಹೋರಂಗಳ, ಕುದ್ಮಾಣಿ, ಕೈತ್ರೋಡಿ ಮತ್ತಿತರ ಕಡೆಗಳಲ್ಲಿ ಇದೀಗ ಮತ್ತೆ ಶಂಕಿತ ಡೆಂಗ್ ಜ್ವರ ಕಾಣಿಸಿಕೊಂಡಿದೆ. ಈಗಾಗಲೇ ಇಬ್ಬರು ಮಕ್ಕಳು ಸಹಿತ ಒಟ್ಟು ಆರು ಮಂದಿಯಲ್ಲಿ ಶಂಕಿತ ಡೆಂಗ್ ಕಾಣಿಸಿಕೊಂಡಿದ್ದು, ಮಂಗಳೂರು ಮತ್ತು ಬಿ.ಸಿ. ರೋಡ್‌ನ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸೇರಿಕೊಂಡಿದ್ದಾರೆ. ರಾಯಿ ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಒದಗಿಸುವಲ್ಲಿ ಪಂಚಾಯತ್ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಇಲ್ಲಿನ ನಾಗರಿಕರು ಆರೋಪಿಸಿದ್ದಾರೆ. ಇಲ್ಲಿನ ರೋಗಪೀಡಿತ ಪ್ರದೇಶಗಳಲ್ಲಿ ಈಗಾಗಲೇ ಫಾಗಿಂಗ್ ನಡೆಸಲಾಗಿದ್ದು, ಆಶಾ ಕಾರ್ಯಕರ್ತೆಯರು ಸಹಿತ ಆರೋಗ್ಯ ಸಹಾಯಕರು ಕರಪತ್ರ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News