ಬಾಗ್ದಾದ್: ಫಲ್ಲೂಜದಿಂದ ಸಾಮೂಹಿಕ ಪಲಾಯನ!
ಬಾಗ್ದಾದ್, ಜೂನ್. 20: ಐಸಿಸ್‌ನಿಂದ ಮರಳಿ ವಶಪಡಿಸಿಕೊಂಡಿರುವ ಇರಾಕ್‌ನ ಫಲ್ಲೂಜದಿಂದ ಪಲಾಯನಗೈಯ್ಯತ್ತಿರುವವರ ಸಂಖ್ಯೆ ದಿಢೀರನೆ ಹೆಚ್ಚಳವಾಗುತ್ತಿದೆ ಎಂದು ವರದಿಯಾಗಿದೆ.
ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ 2300 ಕುಟುಂಬಗಳು ಪಲಾಯನಗೈದಿರುವುದಾಗಿ ವಿಶ್ವಸಂಸ್ಥೆ ನಿರಾಶ್ರಿತರ ಏಜೆನ್ಸಿ ತಿಳಿಸಿದೆ. ಇಲ್ಲಿನ ಸರಕಾರಿ ಕೇಂದ್ರಗಳನ್ನು ಸರಕಾರ ಸ್ವಾಮ್ಯದ ಸೇನೆ ಮರುವಶಪಡಿಸಿಕೊಂಡಿದ್ದು ಈಗ ಪ್ರಧಾನ ಆಸ್ಪತ್ರೆಯ ನಿಯಂತ್ರಣವೂ ಸೇನೆಯ ಕೈಸೇರಿದೆ. ಅದೇ ವೇಳೆ ಈ ಪ್ರದೇಶವನ್ನು ಐಸಿಸ್ ಸಂಪೂರ್ಣ ತೊರೆದು ಹೋಗಿಲ್ಲ. ಪಲಾಯನ ಹೋಗಲು ಉದ್ದೇಶಿಸಿದ ಪ್ರದೇಶಗಳಲ್ಲಿ ಪರಿಮಿತ ಸೌಲಭ್ಯಗಳಿರುವುದು ಬಹುದೊಡ್ಡ ಸಮಸ್ಯೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರಿಗಿರುವ ಏಜೆನ್ಸಿ ತಿಳಿಸಿದೆ. ಸ್ವಯಂ ಸೇವಾ ಸಂಘಟನೆಗಳು ಇವರಿಗೆ ನೆರವಾಗುವ ಪ್ರಯತ್ನವೂ ವಿಫಲವಾಗಿದೆ. ಶುದ್ಧನೀರು ಕೂಡಾ ಸರಿಯಾಗಿ ದೊರೆಯದ ಅವಸ್ಥೆ ಇದ್ದು ಇದು ಎಷ್ಟು ಕಾಲ ಮುಂದುವರಿಯುವುದೆಂದು ಹೇಳಲು ಸಾಧ್ಯವಿಲ್ಲ ಎಂದು ಸ್ವಯಂಸೇವಾ ಸಂಘಟನೆಯ ನಾಸರ್ ಮುಫ್ಲಾಹಿ ಹೇಳಿದ್ದಾರೆ. ಈಗಾಗಲೇ ಪಲಾಯನ ಮಾಡಿರುವ 60,000 ನಾಗರಿಕರು ಅನ್ವರ್ ಪ್ರಾಂತದಲ್ಲಿದ್ದಾರೆ. ಇಲ್ಲಿ ಅವರಿಗೆ ವಿಶ್ವಸಂಸ್ಥೆ ಮತ್ತು ಇರಾಕ್ ಸರಕಾರ ಪುನರ್ವಸತಿ ಕಲ್ಪಿಸಿದೆ. ಆದರೆ ಇಲ್ಲಿಗೆ ಹೆಚ್ಚು ಮಂದಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಭಾರೀ ಹೋರಾಟದಿಂದಾಗಿ ಫಲ್ಲೂಜದಲ್ಲಿ ಸಿಕ್ಕಿಬಿದ್ದವರು ಈಗ ವಲಸೆಹೊರಟರೆಂದು ವರದಿಯಾಗಿದೆ. ಇನ್ನೂ ಸಾವಿರಾರು ಕುಟುಂಬಗಳು ಫಲ್ಲೂಜದಲ್ಲಿ ಸಿಲುಕಿಕೊಂಡಿವೆ, ಇವರ ಸ್ಥಿತಿ ದಯನೀಯವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ವಕ್ತಾರ ಸ್ಟೀಫನ್ ದುಜ್ಜಾರಿಕ್ ಬೆಟ್ಟು ಮಾಡಿದ್ದಾರೆ.