ಅನ್ಯಾಯದ ವಿರುದ್ಧ ಮಹಿಳಾ ಆಯೋಗಕ್ಕೆ ದೂರು: ಅನುಪಮಾ ಶೆಣೈ
ಪಡುಬಿದ್ರೆ, ಜೂ.20: ತನಗಾದ ಅನ್ಯಾಯದ ಬಗ್ಗೆ ಸವಿವರವಾಗಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ತಿಳಿಸಿದ್ದಾರೆ.
ಬಳ್ಳಾರಿಯ ಕೂಡ್ಲಿಗಿಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಿ ಇತ್ತೀಚೆಗಷ್ಟೆ ರಾಜೀನಾಮೆ ನೀಡಿ ಬಳಿಕ ಯಾರ ಕಣ್ಣಿಗೆ ಬೀಳದ ಅನುಪಮಾ ಶೆಣೈ ಉಚ್ಚಿಲದ ಪಣಿಯೂರು ರಸ್ತೆಯಲ್ಲಿರುವ ತನ್ನ ಮನೆಗೆ ರವಿವಾರ ರಾತ್ರಿ ವಾಪಸಾದಾಗ ಮಾಧ್ಯಮದವರೊಂದಿಗೆ ಮಾತನಾಡಿದರು.
ಈಗ ಏನನ್ನೂ ಹೇಳುವುದಿಲ್ಲ. ಅಲ್ಲಿಂದಲೇ ಮಾಹಿತಿ ಪಡೆದುಕೊಳ್ಳಿ. ಈಗಾಗಲೇ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸರನ್ನು ಭೇಟಿಯಾಗಿ ದೂರು ನೀಡಿದ್ದೇನೆ. ನ್ಯಾಯದೊರಕುವ ಭರವಸೆ ಇದೆ ಎಂದಷ್ಟೆ ಹೇಳಿದರು.
ಮೇಲಧಿಕಾರಿಗಳಿಂದ ಕಿರುಕುಳ
ಇಲಾಖೆಯ ಮೇಲಧಿಕಾರಿಗಳಿಂದಲೇ ನನಗೆ ಮಾನಸಿಕ ಹಿಂಸೆ ಉಂಟಾಗಿದ್ದು, ಇದರಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಮನೆಯೊಳಗಿನ ಶತ್ರುಗಳನ್ನು ನಿಭಾಯಿಸುವುದು ಕಷ್ಟ. ಡಿಜಿ ಹಾಗೂ ಎಸ್ಪಿ ನಿರಂತರ ಕಿರುಕುಳ ನೀಡುತಿದ್ದರು. ತಾನು ಎರಡು ರಾಜೀನಾಮೆ ಪತ್ರವನ್ನು ಮೇಲಧಿಕಾರಿಗಳಿಗೆ ಕಳುಹಿಸಿದ್ದೇನೆ. ಒಂದು ಪತ್ರದಲ್ಲಿ ವೈಯಕ್ತಿಕ ಕಾರಣಕ್ಕೆ ಎಂದು ಹೇಳಿ ಇನ್ನೊಂದರಲ್ಲಿ ವಿವರವಾಗಿ ವಿವರಿಸಿ ತಿಳಿಸಲಾಗಿದೆ. ಆದರೆ ವೈಯಕ್ತಿಕ ಕಾರಣಕ್ಕೆ ನೀಡಿದ ರಾಜಿನಾಮೆ ಪತ್ರವನ್ನು ಸ್ವೀಕರಿಸಿ, ಇನ್ನೊಂದನ್ನು ವಾಪಸ್ ಕಳುಹಿಸಿದ್ದಾರೆ ಎಂದು ಹೇಳಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಡಿಜಿಯವರು ನನ್ನನ್ನು ರಜೆಯಲ್ಲಿ ಕಳುಹಿಸಿದ್ದಾರೆ. ಈ ರೀತಿ ಮಾಡಲು ಅವರಿಗೆ ಯಾರು ಒತ್ತಡ ಹೇರಿದ್ದಾರೆ ಎಂದು ಡಿಜಿಯವರು ಹೇಳಬೇಕು. ರಾಜೀನಾಮೆ ನೀಡಿದ ಕೂಡಲೇ ರಾಜಿನಾಮೆ ಸ್ವೀಕೃತಗೊಳ್ಳಲು ಏನು ಕಾರಣ ಎಂದು ಪ್ರಶ್ನಿಸಿದ ಅನುಪಮಾ, ಇಲಾಖೆಯಲ್ಲಿ ಕೆಲವೊಂದು ಕ್ರಮಗಳಿವೆ. ಆ ಕ್ರಮವನ್ನು ತನ್ನ ರಾಜೀನಾಮೆ ಸ್ವೀಕೃತಗೊಳಿಸುವಾಗ ಅನುಸರಿಸಿಲ್ಲ. ತನ್ನ ಮನೆಗೆ ನೋಟಿಸು ನೀಡುವಾಗ ನನಗಿಂತ ಮೇಲಾಧಿಕಾರಿಗಳನ್ನು ಮನೆಗೆ ಕಳುಹಿಸಬೇಕಿತ್ತು. ಆದರೆ ತನಗಿಂತ ಕಿರಿಯ ಅಧಿಕಾರಿಗಳನ್ನು ಕಳುಹಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ನನ್ನ ಮನೆಯವರಿಗೆ ಕಿರುಕುಳ ನೀಡಬೇಡಿ. ನನ್ನೊಂದಿಗೆ ಹೋರಾಟ ಮಾಡಿ ಎಂದು ಹೇಳಿದರು.
ಫೇಸ್ಬುಕ್ ಖಾತೆ ನನ್ನದಲ್ಲ. ಅದು ಹ್ಯಾಕ್ ಆಗಿರಬಹುದು. ಈ ಬಗ್ಗೆ ದೂರು ನೀಡುವುದಿಲ್ಲ. ನನಗೆ ದೂರು ನೀಡುವ ಅಂಶ ಯಾವುದೂ ಕಂಡುಬಂದಿಲ್ಲ. ಫೇಸ್ಬುಕ್‌ನಲ್ಲಿ ಅದಕ್ಕಿಂತ ಕೀಳು ಮಟ್ಟದ ಭಾಷೆ ಬಳಕೆಯಾಗುತ್ತಿದೆ ಎಂದ ಅವರು ತಾನು ಯಾವತ್ತೂ ರಾಜಕಾರಣಕ್ಕೆ ಸೇರಲ್ಲ ಎಂದರು.