ರಾಜ್ಯದಲ್ಲಿ ಕೆರೆಗಳ ಸಂರಕ್ಷಣೆಗೆ ವಿವಿಧ ಯೋಜನೆಗಳ ಅನುಷ್ಠಾನ: ಸಚಿವ ರಮಾನಾಥ ರೈ
ಗಳೂರು, ಜೂ.20: ರಾಜ್ಯದ ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿಗೆ 100 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರತಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಕೆರೆಯನ್ನು ಸ್ಥಳೀಯ ಕಂಪೆನಿಯ ಸಿಎಸ್‌ಆರ್ ನಿಧಿಯನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಸರಕಾರ ಹಮ್ಮಿಕೊಂಡಿದೆ ಎಂದು ರಾಜ್ಯ ಅರಣ್ಯ, ಪರಿಸರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಅವರು ಇಂದು ನಗರದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಇರುವ ಕರೆ ಅಭಿವೃದ್ಧಿ ಪ್ರಾಧಿಕಾರವನ್ನು ಸರಕಾರ ತಿದ್ದುಪಡಿ ಮಾಡಿ ಕೆರೆ ಅಭಿವೃದ್ಧಿ ಹಾಗೂ ಸಂರಕ್ಷಣಾ ಪ್ರಾಧಿಕಾರವಾಗಿ ಬದಲಾವಣೆ ಮಾಡಿದೆ. ಇದರೊಂದಿಗೆ ಕೆರೆಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರಕಾರದ ಅಮೃತ್ ಯೋಜನೆಯ ಮೂಲಕ ರಾಜ್ಯ ಹಾಗೂ ಕೇಂದ್ರದ ಅನುದಾನದೊಂದಿಗೆ ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ನಗರ ಪ್ರದೇಶದ ಕೆರೆಗಳ ಅಭಿವೃದ್ಧಿಗೆ ಯೋಜನೆ ಹಮ್ಮಿಕೊಳ್ಳಲಾಗಿದೆ. 2020ರೊಳಗೆ ಬಿಬಿಎಂಪಿಯ ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಹೊಂದಿದೆ. ಈ ಸಂದರ್ಭ ನಗರಾಡಳಿತ ಸಂಸ್ಥೆಗಳನ್ನು ನೋಡಲ್ ಏಜೆನ್ಸಿಗಳಾಗಿ ಪರಿಗಣಿಸಲಾಗುವುದು ಎಂದು ರಮಾನಾಥ ರೈ ತಿಳಿಸಿದರು.
ಪ್ರತಿ ಮನಪಾ ವ್ಯಾಪ್ತಿಯಲ್ಲಿಯೂ ಕನಿಷ್ಠ ಒಂದು ಕೆರೆಯನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಕೈ ಗೆತ್ತಿಕೊಳ್ಳುವುದರ ಜೊತೆಗೆ ಅರಣ್ಯ ರಕ್ಷಕರಂತೆ ಕೆರೆಗಳ ರಕ್ಷಣೆಗೆ ಕೆರೆಗಳ ರಕ್ಷಕ ವಾರ್ಡನ್‌ಗಳನ್ನು ನೇಮಕಮಾಡಲು ಸರಕಾರ ಕ್ರಮ ಕೈಗೊಳ್ಳಲಿದೆ. ನಗರ ಪ್ರದೇಶದಲ್ಲಿ ಕೆರೆಗಳ ಅಭಿವೃದ್ಧಿಗೆ ಈಗಾಗಲೆ ಕೆಲವು ಕಂಪೆನಿಗಳು ಮುಂದೆ ಬಂದಿವೆ ಎಂದು ರಮಾನಾಥ ರೈ ತಿಳಿಸಿದರು.
‘ಹಸಿರು ಗ್ರಾಮ’,‘ಹಸಿರು ಶಾಲೆ’ ಯೋಜನೆ
ರಾಜ್ಯದಲ್ಲಿ ಆಯ್ದ ಗ್ರಾಮಗಳಲ್ಲಿ ಅರಣ್ಯ ಅಭಿವೃದ್ಧಿ ಹಾಗೂ ಗಿಡಗಳನ್ನು ಬೆಳೆಸಲು ಪರಿಸರ ಸಂರಕ್ಷಣೆಗಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಸಿರು ಗ್ರಾಮ ಯೋಜನೆಯನ್ನು ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ.ಈ ಯೋಜನೆಯ ಪ್ರಕಾರ ಒಂದು ಗ್ರಾಮಕ್ಕೆ 25 ಲಕ್ಷ ರೂ. ವೆಚ್ಚದಲ್ಲಿ ನೆಡು ತೋಪು,ಗೊಬರ್ ಗ್ಯಾಸ್ ಪ್ಲಾಂಟೇಶನ್, ಎಲ್‌ಪಿಜಿ ಲೈಟ್ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಮಾನಾಥ ರೈ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮವನ್ನು ಹಸಿರು ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದೆ. ಬಂಟ್ವಾಳ ತಾಲೂಕಿನ ಸರಪಾಡಿ ಶಾಲೆಯನ್ನು ಹಸಿರು ಶಾಲೆ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ರೀತಿ ಆಯ್ಕೆಯಾದ ಶಾಲೆಗಳಲ್ಲಿ 5ಲಕ್ಷ ರೂ. ವೆಚ್ಚದಲ್ಲಿ ಮರಗಳನ್ನು, ನೆಡು ತೋಪುಗಳನ್ನು ಬೆಳೆಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಪಡುಮಲೆಯಲ್ಲಿ ಔಷಧೀಯ ವನ ನಿರ್ಮಾಣ
ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ದೇಯಿ ಬೈದೇದಿ ಔಷಧೀಯ ವನವನ್ನು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದು ಸಚಿವ ರಮಾನಾಥ ರೈ ತಿಳಿಸಿದರು.
ಜನಸಹಭಾಗಿತ್ವದ ಗಿಡ ಬೆಳೆಸುವ ಯೋಜನೆಯನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿದೆ. ಈ ಯೋಜನೆಯ ಪ್ರಕಾರ ಅರಣ್ಯ ಇಲಾಖೆಯ ಮೂಲಕ ಗಿಡಗಳನ್ನು ರೈತರಿಗೆ ವಿತರಿಸಿ ಮೊದಲ ವರ್ಷ ಗಿಡದ ಬೆಳೆಸುವವರಿಗೆ 10 ರೂ. ಪೋತ್ಸಾಹ ಧನ ನೀಡಲಾಗುವುದು. ಎರಡನೆ ವರ್ಷ 15 ರೂ. ಮೂರನೆ ವರ್ಷ 20 ರೂ. ಮತ್ತು ನಾಲ್ಕನೆ ವರ್ಷ 45 ರೂ. ಪೋತ್ಸಾಹ ಧನ ನೀಡಲಾಗುವುದು. ಈ ರೀತಿಯ ಕೃಷಿ ಯೋಜನೆಗೆ ಈ ಬಾರಿ ಇನ್ನಷ್ಟು ಹಣ ವಿನಿಯೋಗಿಸುವ ಉದ್ದೇಶ ಹೊಂದಿರುವುದಾಗಿ ರಮಾನಾಥ ರೈ ತಿಳಿಸಿದರು.